ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬುದನ್ನು ಅಕ್ಷರಶಃ ಪಾಲಿಸುವ ಮೂಲಕ ಸಾರ್ವಜನಿಕರೊಂದಿಗೆ ಸೌಜನ್ಯ, ಪ್ರಾಮಾಣಿಕತೆ ಮತ್ತು ಮಾನವೀಯತೆಯಿಂದ ವರ್ತಿಸಬೇಕು. ಜನರ ಸಮಸ್ಯೆಗಳನ್ನು ಕೇವಲ ಕಡತ, ಅರ್ಜಿ ಅಥವಾ ದಾಖಲೆಗಳಾಗಿ ನೋಡದೆ, ಅವುಗಳ ಹಿಂದೆ ಇರುವ ನೋವು, ಸಂಕಷ್ಟ ಹಾಗೂ ಅಗತ್ಯವನ್ನು ಅರ್ಥಮಾಡಿಕೊಂಡು ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕರೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸರ್ಕಾರಿ ಸೇವೆಯ ಮಹತ್ವ, ಅಧಿಕಾರಿಗಳ ಜವಾಬ್ದಾರಿ ಹಾಗೂ ಜನಸ್ನೇಹಿ ಆಡಳಿತದ ಅಗತ್ಯವನ್ನು ಒತ್ತಿ ಹೇಳಿದರು.
ಭಾರತಕ್ಕೆ ಸ್ವಾತಂತ್ರ್ಯ ದೊರೆತ ಐತಿಹಾಸಿಕ ಸಂದರ್ಭವನ್ನು ಸ್ಮರಿಸಿದ ಜಿಲ್ಲಾಧಿಕಾರಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶ ನಿರ್ಮಾಣಕ್ಕಾಗಿ ಅಂದಿನ ವಿದ್ವಾಂಸರು ಮತ್ತು ಪಂಡಿತರು ನೀಡಿದ ಸಲಹೆ-ಸೂಚನೆಗಳನ್ನು ನೆನಪಿಸಿಕೊಂಡರು.
ದೇಶ ನಿರ್ಮಾಣದ ಕಾರ್ಯದಲ್ಲಿ ದೇಶಭಕ್ತಿ, ಕರ್ತವ್ಯನಿಷ್ಠೆ ಹಾಗೂ ದೈವಬಲದ ಮೇಲಿನ ನಂಬಿಕೆ ಪ್ರತಿಯೊಬ್ಬರಲ್ಲೂ ಇರಬೇಕು. ಸರ್ಕಾರಿ ನೌಕರಿ ದೊರೆಯುವುದು ಕೇವಲ ಉದ್ಯೋಗವಲ್ಲ, ಅದು ದೊಡ್ಡ ಅವಕಾಶದ ಜೊತೆಗೆ ಮಹತ್ವದ ಜವಾಬ್ದಾರಿಯಾಗಿದೆ. ಕೋಟ್ಯಂತರ ಜನಸಂಖ್ಯೆಯಲ್ಲಿ ಕೆಲವೇ ಲಕ್ಷ ಮಂದಿಗೆ ಸರ್ಕಾರಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಹೀಗಾಗಿ, ‘ಸಮಾಜ ನಮಗೆ ಏನು ಕೊಟ್ಟಿದೆ?’ ಎನ್ನುವುದಕ್ಕಿಂತ ‘ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ?’ ಎಂದು ಪ್ರತಿಯೊಬ್ಬ ಸರ್ಕಾರಿ ನೌಕರರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ತಮ್ಮ ಸಮಸ್ಯೆಗಳನ್ನು ಹೊತ್ತು ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಜನರೊಂದಿಗೆ ನಾಲ್ಕು ಹಿತನುಡಿಗಳನ್ನು ಆಡಿದರೂ ಅವರ ಅರ್ಧ ಸಮಸ್ಯೆ ಪರಿಹಾರವಾದಂತಾಗುತ್ತದೆ. ಸಾರ್ವಜನಿಕರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಸಾಧ್ಯವಾದಷ್ಟು ಶೀಘ್ರವಾಗಿ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜನರ ಸಮಸ್ಯೆಗಳನ್ನು ಕೇವಲ ಕಡತ, ಅರ್ಜಿ ಅಥವಾ ದಾಖಲೆಗಳ ರೂಪದಲ್ಲಿ ನೋಡಬಾರದು. ಆ ಕಡತದ ಹಿಂದೆ ಒಬ್ಬ ವ್ಯಕ್ತಿಯ ನೋವು, ಸಂಕಷ್ಟ ಮತ್ತು ಅಗತ್ಯವಿರುತ್ತದೆ. ಅದನ್ನು ಅರ್ಥಮಾಡಿಕೊಂಡು ಮಾನವೀಯತೆಯಿಂದ ಸ್ಪಂದಿಸುವ ಮನೋಭಾವ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಇರಬೇಕು ಎಂದು ಸಿ.ಎನ್. ಶ್ರೀಧರ್ ಹೇಳಿದರು.
ಅಧಿಕಾರ ಮತ್ತು ಹುದ್ದೆಯನ್ನು ಜನಸೇವೆಗೆ ಬಳಸಿಕೊಳ್ಳಬೇಕು. ಜನರ ಸೇವೆ ಮಾಡುವ ಮೂಲಕ ಪುಣ್ಯ ಸಂಪಾದಿಸುವ ಅಪೂರ್ವ ಅವಕಾಶ ಸರ್ಕಾರಿ ಸೇವೆಯಲ್ಲಿದೆ. ಸಮಾಜದಿಂದ ಪಡೆಯುವುದಕ್ಕಿಂತ ಸಮಾಜಕ್ಕೆ ನೀಡುವುದರಲ್ಲಿ ಹೆಚ್ಚಿನ ಸಂತೃಪ್ತಿ ದೊರೆಯುತ್ತದೆ ಎಂದರು.
ದೇಶದ ಅಭಿವೃದ್ಧಿ ಹಾಗೂ ಜನಕಲ್ಯಾಣಕ್ಕಾಗಿ ಪ್ರತಿಯೊಬ್ಬ ಸರ್ಕಾರಿ ನೌಕರರೂ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ಸೌಜನ್ಯ ಮತ್ತು ಮಾನವೀಯತೆಯಿಂದ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಬೇಕು ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.
ಜಿಲ್ಲಾಡಳಿತದ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಎಸ್.ಎಸ್. ಮುಂಡರಗಿ, ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸರ್ಕಾರಿ ನೌಕರರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ನಮ್ಮಲ್ಲಿ ಮನುಷ್ಯತ್ವ ತುಂಬಿದ್ದರೆ, ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಅದು ಪ್ರತಿಫಲಿಸುತ್ತದೆ. ಸರ್ಕಾರ ನಮಗೆ ನೀಡಿರುವ ಅಧಿಕಾರವನ್ನು ಸಮಾಜಕ್ಕೆ ಮರುಪಾವತಿ ಮಾಡುವ ಸೇವಾ ಮನೋಭಾವದಿಂದ ಬಳಸಿಕೊಳ್ಳೋಣ.
— ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ



