ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳ ಮೀಸಲಾತಿ ವ್ಯವಸ್ಥೆಯಲ್ಲಿನ ರೋಸ್ಟರ್ ಬಿಂದುವಿನಿಂದ ಬಂಜಾರ ಸಮುದಾಯದ ಯುವಕರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಮಜ್ಜೂರ ತಾಂಡಾದ ಯುವಕರು ಆ. 15ರಂದು ಮನವಿ ಸಲ್ಲಿಸಿದರು.
ಒಳ ಮೀಸಲಾತಿ ವ್ಯವಸ್ಥೆಯಲ್ಲಿ ಬಂಜಾರ ಸಮುದಾಯದ ಯುವಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿ, ಅನ್ಯಾಯ ಸರಿಪಡಿಸಬೇಕು. ವಿಶೇಷವಾಗಿ ರೋಸ್ಟರ್ ಬಿಂದುವಿನಿಂದ ಉದ್ಯೋಗ ಹಾಗೂ ಶೈಕ್ಷಣಿಕ ಅವಕಾಶಗಳಲ್ಲಿ ಸಮುದಾಯಕ್ಕೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ವಕೀಲರು ಹಾಗೂ ಗೋರಸೇನಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ತಾಂಡಾದ ಯುವಕರು ಸಲ್ಲಿಸಿರುವ ಮನವಿಯಲ್ಲಿನ ಅಂಶಗಳು ಗಂಭೀರವಾಗಿದ್ದು, ಬಂಜಾರ ಸಮುದಾಯದ ವಾಸ್ತವ ಸಮಸ್ಯೆಯನ್ನು ಪ್ರತಿಬಿಂಬಿಸುತ್ತವೆ ಎಂದರು.
ಶಿರಹಟ್ಟಿ ತಾಲೂಕಿನ ತಾಂಡಾ ಯುವಕರು ಸಲ್ಲಿಸಿರುವ ಮನವಿಯ ಅಂಶಗಳು ರಾಜ್ಯದಾದ್ಯಂತ ಇರುವ ಬಂಜಾರ ಸಮುದಾಯದ ಸಮಸ್ಯೆಯ ಪ್ರತಿಬಿಂಬವಾಗಿವೆ. ತಾಂಡಾ ತಾಂಡಾಗಳಿಗೆ ತೆರಳಿ ಜನಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅವರು ತಿಳಿಸಿದರು.
ಬಂಜಾರ ಸಮುದಾಯದ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಮಾನ ಅವಕಾಶ ದೊರೆಯುವಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ರೋಸ್ಟರ್ ಬಿಂದುವಿನಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ಪರಿಶೀಲಿಸಿ, ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಶೀಘ್ರ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಜ್ಜೂರ ತಾಂಡಾದ ಯುವಕರು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
“ಒಳ ಮೀಸಲಾತಿಯಲ್ಲಿನ ರೋಸ್ಟರ್ ಬಿಂದುವಿನ ಪರಿಣಾಮವಾಗಿ ಉದ್ಯೋಗ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬುದು ಯುವಕರ ಆತಂಕವಾಗಿದೆ. ‘ರೋಸ್ಟರ್ ಬಿಂದು ಹಠಾವೋ, ಒಳ ಮೀಸಲಾತಿ ಬಚಾವೋ’ ಎಂಬ ಘೋಷಣೆಯೊಂದಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು.”
— ರವಿಕಾಂತ ಅಂಗಡಿ, ಗೋರಸೇನಾ ರಾಜ್ಯಾಧ್ಯಕ್ಷ



