HomeGadag Newsಸ್ವಾತಂತ್ರ್ಯದ ಮೌಲ್ಯ ಅರಿತು ಕರ್ತವ್ಯ ಪಾಲಿಸೋಣ: ತಹಸೀಲ್ದಾರ್ ಧನಂಜಯ ಎಂ. ಕರೆ

ಸ್ವಾತಂತ್ರ್ಯದ ಮೌಲ್ಯ ಅರಿತು ಕರ್ತವ್ಯ ಪಾಲಿಸೋಣ: ತಹಸೀಲ್ದಾರ್ ಧನಂಜಯ ಎಂ. ಕರೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸ್ವತಂತ್ರ ಭಾರತದ ಶತಮಾನೋತ್ಸವದತ್ತ ದೇಶ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ‘ನಾವೆಲ್ಲ ಭಾರತಮಾತೆಯ ಮಕ್ಕಳು’ ಎಂಬ ಒಗ್ಗಟ್ಟಿನ ಮಂತ್ರದೊಂದಿಗೆ ನವಭಾರತ ನಿರ್ಮಾಣದ ಸಂಕಲ್ಪ ಕೈಗೊಂಡು ದೇಶದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಹಸೀಲ್ದಾರ್ ಧನಂಜಯ ಎಂ. ಕರೆ ನೀಡಿದರು.

ಪಟ್ಟಣದ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ನಡೆದ ೮೦ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

೧೯೪೭ರ ಆಗಸ್ಟ್ ೧೫ರಂದು ಭಾರತ ಸ್ವಾತಂತ್ರ್ಯ ಪಡೆದಿದ್ದು, ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಹೋರಾಟದ ಫಲವಾಗಿದೆ. ಸ್ವಾತಂತ್ರ್ಯ ನಮಗೆ ಹಕ್ಕುಗಳ ಜತೆಗೆ ಕರ್ತವ್ಯಗಳನ್ನೂ ನೀಡಿದೆ. ಸಂವಿಧಾನದ ಆಶಯಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಹಾಗೂ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ವಿಶ್ವದ ಗಮನ ಸೆಳೆಯುತ್ತಿದೆ. ಆದರೆ ಭ್ರಷ್ಟಾಚಾರ, ಭಯೋತ್ಪಾದನೆ, ಜಾತೀಯತೆ ಹಾಗೂ ಕೋಮುವಾದದಂತಹ ಸಮಸ್ಯೆಗಳನ್ನು ದೇಶ ಎದುರಿಸುತ್ತಿದೆ. ದೇಶದ ಸಂಪತ್ತಾಗಿರುವ ಯುವಜನತೆ ದುಶ್ಚಟಗಳು ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿದ್ದು, ಪ್ರಜ್ಞಾವಂತ ನಾಗರಿಕರಾಗಿ ದೇಶದ ಶ್ರೇಷ್ಠತೆ, ಏಕತೆ, ಸ್ವಚ್ಛತೆ ಹಾಗೂ ಪ್ರಗತಿಗಾಗಿ ಶ್ರಮಿಸಬೇಕು ಎಂದು ಹೇಳಿದರು.

ಲಕ್ಷ್ಮೇಶ್ವರ ತಾಲೂಕನ್ನು ಸ್ವಚ್ಛ, ಹಸಿರು ಹಾಗೂ ಅಭಿವೃದ್ಧಿ ಹೊಂದಿದ ತಾಲೂಕನ್ನಾಗಿ ರೂಪಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಪರಿಸರ ಸಂರಕ್ಷಣೆ, ನೀರಿನ ಉಳಿತಾಯ ಹಾಗೂ ಸಾರ್ವಜನಿಕ ಆಸ್ತಿಯ ರಕ್ಷಣೆಗೆ ಆದ್ಯತೆ ನೀಡಬೇಕು. ‘ದೇಶ ನನಗಾಗಿ ಏನು ಮಾಡಿದೆ ಎನ್ನುವುದಕ್ಕಿಂತ, ನಾನು ದೇಶಕ್ಕಾಗಿ ಏನು ಮಾಡಬಹುದು’ ಎಂಬ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿ, ಈ ಭಾಗದ ಅನೇಕ ಗ್ರಾಮಗಳ ನೂರಾರು ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಅವರ ತ್ಯಾಗವನ್ನು ಸ್ಮರಿಸುತ್ತಾ ದೇಶಕ್ಕಾಗಿ ನಮ್ಮ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರೂ ಚಿಂತಿಸಬೇಕು ಎಂದು ಹೇಳಿದರು.

ಧ್ವಜಾರೋಹಣದ ಬಳಿಕ ಪೊಲೀಸ್, ಎನ್‌ಸಿಸಿ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪಥಸಂಚಲನದ ನೇತೃತ್ವವನ್ನು ಪ್ರೊ. ಪಿಎಸ್‌ಐ ರಮಾಕಾಂತ ಗುಗ್ಗರಿ ವಹಿಸಿದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಬಿ.ಡಿ. ತಟ್ಟಿ ಕಿವುಡ ಮಕ್ಕಳ ಶಾಲೆ ಹಾಗೂ ಅರಳು ವಿಶೇಷಚೇತನ ಮಕ್ಕಳಿಂದ ನಡೆದ ವೇಷಭೂಷಣ ಮತ್ತು ದೇಶಭಕ್ತಿ ಗೀತೆಗಳ ನೃತ್ಯ ಗಮನ ಸೆಳೆಯಿತು. ಸ್ಕೂಲ್ ಚಂದನ ಶಾಲೆಯ ವಿದ್ಯಾರ್ಥಿಗಳ ವಿಶೇಷ ಬ್ಯಾಂಡ್ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ಕಾರ್ಯಕ್ರಮದಲ್ಲಿ ಗ್ರೇಡ್–೨ ತಹಸೀಲ್ದಾರ ಮಂಜುನಾಥ ಅಮಾಸಿ, ತಾಪಂ ಇಒ ಮಂಜುಳಾ ಹಕಾರಿ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಉಪನೋಂದಣಾಧಿಕಾರಿ ಎಸ್.ಕೆ. ಜಲರಡ್ಡಿ, ಪಿಎಸ್‌ಐ ನಾಗರಾಜ ಗಡದ, ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ನೌಕರರ ಸಂಘದ ಅಧ್ಯಕ್ಷ ಗುರುರಾಜ ಹವಳದ, ಸಿಡಿಪಿಒ ಮೃತ್ಯುಂಜಯ ಜಿ., ಪ್ರಶಾಂತ ಕಿಮಾಯಿ, ರೇಣುಕಾ ಶಿರಹಟ್ಟಿ, ಆರ್.ಬಿ. ಜೋಶಿ, ಬಿ.ಎಂ. ಯರಗುಪ್ಪಿ, ಉಮೇಶ ನೇಕಾರ, ಎನ್.ಎ. ಮುಲ್ಲಾ, ನವೀನ ಅಂಗಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಕಂದಾಯ ನಿರೀಕ್ಷಕ ಎಂ.ಎ. ನಧಾಪ್ ಸ್ವಾಗತಿಸಿದರು. ಶಿರಸ್ತೇದಾರ ಜಮೀರ ಮನಿಯಾರ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ಕಾರ್ಯಕ್ರಮ ನಿರ್ವಹಿಸಿದರು.

“ಸ್ವಾತಂತ್ರ್ಯ ನಮಗೆ ಹಕ್ಕುಗಳ ಜತೆಗೆ ಕರ್ತವ್ಯಗಳನ್ನೂ ನೀಡಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು.”

— ಧನಂಜಯ ಎಂ., ತಹಸೀಲ್ದಾರ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img