ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಆರೋಪಿ ಪ್ರದೂಷ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ 59ನೇ ಸಿಸಿಎಚ್ ನ್ಯಾಯಾಲಯ, ಆಗಸ್ಟ್ 20ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಪ್ರದೂಷ್ ಅವರ ವಿಚಾರಣೆ ನಡೆಸಿದ 59ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಆದೇಶ ಕಾಯ್ದಿರಿಸಿ ವಿಚಾರಣೆ ಮುಂದೂಡಿದ್ದಾರೆ.
ಪ್ರದೂಷ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯಲ್ಲಿನ ಅಂಶಗಳನ್ನು ಅವರಿಂದಲೇ ಖಚಿತಪಡಿಸಿಕೊಳ್ಳಬೇಕು ಎಂದು ಕೋರಿದ ದರ್ಶನ್ ಪರ ವಕೀಲರು, ಪ್ರದೂಷ್ ಮಾಫಿ ಸಾಕ್ಷಿಯಾದರೆ ಪ್ರಕರಣದಿಂದ ಹೊರಬರಬಹುದು ಎಂಬ ಆಸೆಯಿಂದ ಈ ರೀತಿ ಹೇಳಿಕೆ ನೀಡುತ್ತಿರಬಹುದು ಎಂದು ಅಭಿಪ್ರಾಯಪಟ್ಟರು. ಅವರಿಗೆ ಯಾವುದಾದರೂ ಆಮಿಷ ಅಥವಾ ಒತ್ತಡ ಇರಬಹುದೇ ಎಂಬ ಬಗ್ಗೆ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು, ಮಾಫಿ ಸಾಕ್ಷಿಯ ಪರಿಣಾಮಗಳ ಕುರಿತು ಪ್ರದೂಷ್‌ಗೆ ಅರಿವು ಮೂಡಿಸಿದರು. ಹೇಳುವ ಅಂಶಗಳು ಸತ್ಯವಲ್ಲ ಎಂದಾದರೆ ಜೈಲಿನಲ್ಲೇ ಇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ ಪ್ರದೂಷ್, ತನ್ನ ಪರ ವಕೀಲರು ಎಲ್ಲ ಅಂಶಗಳನ್ನು ಗಮನಕ್ಕೆ ತಂದಿರುವುದಾಗಿ ತಿಳಿಸಿದರು. ಅಂತಿಮವಾಗಿ ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದರು.



