ಮಂಡ್ಯ: ಮದ್ದೂರು ನಗರದ ಮಳವಳ್ಳಿ ರಸ್ತೆಯಲ್ಲಿರುವ ಗಿಲ್ ವುಡ್ ಫ್ಯಾಷನ್ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಗುರುವಾರ ಬೆಳಗಿನ ಜಾವ ಭಾರೀ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿಯ ತೀವ್ರತೆಗೆ ಕಾರ್ಖಾನೆಯಲ್ಲಿದ್ದ ಬಟ್ಟೆ, ಯಂತ್ರೋಪಕರಣಗಳು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಗುರುವಾರ ಬೆಳಿಗ್ಗೆ ಕಾರ್ಮಿಕರು ಎಂದಿನಂತೆ ಕೆಲಸಕ್ಕೆ ಆಗಮಿಸಿದಾಗ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಕೆಲವೇ ಸಮಯದಲ್ಲಿ ಬೆಂಕಿ ಕಾರ್ಖಾನೆಯ ಒಳಭಾಗಕ್ಕೆ ವೇಗವಾಗಿ ಹರಡಿದ್ದು, ದಟ್ಟ ಹೊಗೆ ಆವರಿಸಿಕೊಂಡಿತ್ತು.
ತಕ್ಷಣ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಮದ್ದೂರು ಸೇರಿದಂತೆ ವಿವಿಧೆಡೆಯಿಂದ ಮೂರಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹಲವು ಗಂಟೆಗಳ ಕಾಲ ಹರಸಾಹಸ ನಡೆಸಿದರು. 15ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಸಿಬ್ಬಂದಿ ಕೂಡ ಬೆಂಕಿ ನಂದಿಸುವ ಕಾರ್ಯದಲ್ಲಿ ನೆರವಾದರು.
ಕಾರ್ಖಾನೆಯಲ್ಲಿದ್ದ ಬಟ್ಟೆ, ಸಿದ್ಧ ಉಡುಪುಗಳು, ಯಂತ್ರೋಪಕರಣಗಳು ಹಾಗೂ ಇತರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಿಂದ ಸುಮಾರು ₹5ರಿಂದ ₹6 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳು ನಾಶವಾಗಿರುವುದಾಗಿ ಅಂದಾಜಿಸಲಾಗಿದೆ.
ಈ ಗಾರ್ಮೆಂಟ್ಸ್ ಕಾರ್ಖಾನೆ ಈ ಹಿಂದೆ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇತ್ತೀಚೆಗೆ ಕಾರ್ಖಾನೆಯನ್ನು ಸೋಮನಹಳ್ಳಿಯಿಂದ ಮದ್ದೂರು ನಗರಕ್ಕೆ ಸ್ಥಳಾಂತರಿಸಲಾಗಿತ್ತು. ಸ್ಥಳಾಂತರಗೊಂಡ ಕೆಲವೇ ದಿನಗಳಲ್ಲಿ ಈ ಅಗ್ನಿ ಅವಘಡ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಅಗ್ನಿ ಅವಘಡದ ವೇಳೆ ಕಾರ್ಮಿಕರು ಕೆಲಸಕ್ಕೆ ಆಗಮಿಸುತ್ತಿದ್ದ ಸಮಯವಾಗಿದ್ದರೂ, ಬೆಂಕಿ ಕಾಣಿಸಿಕೊಂಡ ಕೂಡಲೇ ಎಲ್ಲರೂ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.
ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ಇನ್ನೂ ಖಚಿತವಾಗಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿತೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.
ಘಟನೆಯಿಂದ ಗಾರ್ಮೆಂಟ್ಸ್ ಮಾಲೀಕರು ಹಾಗೂ ಕಾರ್ಮಿಕರಲ್ಲಿ ಆತಂಕ ಮೂಡಿದ್ದು, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಹಾಗೂ ಸಂಭವಿಸಿದ ಒಟ್ಟು ನಷ್ಟದ ಬಗ್ಗೆ ಅಧಿಕಾರಿಗಳ ಪರಿಶೀಲನೆಯ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.



