ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಹೀರಾಲಾಲ್ ಬಿ. ಸಿಂಗ್ರಿ ಅವರು ಗದಗ-ಬೆಟಗೇರಿ ನಗರಸಭೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರಸಭೆಯಿಂದ ತೆರವುಗೊಳಿಸಲಾದ ೫೪ ವಕಾರಗಳು ಇಂದಿಗೂ ಪಾಳುಬಿದ್ದಿದ್ದು, ಅಲ್ಲಿನ ಜಾಗದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ನಗರಸಭೆಗೆ ಶಾಶ್ವತ ಆದಾಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಹಳೇ ಬಸ್ ನಿಲ್ದಾಣದಿಂದ ಬ್ಯಾಂಕ್ ರಸ್ತೆ, ಟಾಂಗಾಕೂಟ ರಸ್ತೆವರೆಗೆ ಬೀದಿ ವ್ಯಾಪಾರಿಗಳ ತಳ್ಳುಗಾಡಿಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವ್ಯಾಪಾರಿಗಳನ್ನು ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸಿ ರಸ್ತೆಗಳನ್ನು ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಗಟಾರ ದುರಸ್ತಿ ಕಾರ್ಯವನ್ನೂ ತ್ವರಿತವಾಗಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇಂದ್ರವನ ರದ್ದುಪಡಿಸಿ ಎಸ್.ಎಂ. ಕೃಷ್ಣಾ ನಗರದವರೆಗೆ ರಸ್ತೆ ನಿರ್ಮಿಸಬೇಕು. ಈ ಕುರಿತು ನಗರಸಭೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.



