HomeGadag Newsಬೆಳೆ ಹಾನಿಗೆ ರೈತರ ಕೈಹಿಡಿಯಲು ಜಿಲ್ಲಾಡಳಿತ ಸಜ್ಜು

ಬೆಳೆ ಹಾನಿಗೆ ರೈತರ ಕೈಹಿಡಿಯಲು ಜಿಲ್ಲಾಡಳಿತ ಸಜ್ಜು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಮುಂಗಾರು ಹಂಗಾಮಿನಲ್ಲಿ ಮಳೆಯ ವ್ಯತ್ಯಯ ಹಾಗೂ ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ‘ಮಧ್ಯ ಋತು ಸಂಕಷ್ಟ’ ನಿಯಮ ಜಾರಿಗೊಳಿಸುವ ಕುರಿತು ಪರಿಶೀಲನೆ ನಡೆಸಲಾಗಿದ್ದು, ಬೆಳೆ ನಷ್ಟದ ನಿಖರ ಅಂದಾಜಿಗಾಗಿ ಉಪಗ್ರಹ ದತ್ತಾಂಶ ಹಾಗೂ ಜಂಟಿ ಕ್ಷೇತ್ರ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮುಂಗಾರು ಹಂಗಾಮಿನ ಬೆಳೆಗಳಿಗೆ ‘ಮಧ್ಯ ಋತು ಸಂಕಷ್ಟ’ ಜಾರಿ ಕುರಿತು ಜಿಲ್ಲಾ ಮಟ್ಟದ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿದರು.

ಪ್ರಸಕ್ತ ಮುಂಗಾರು ಋತುವಿನಲ್ಲಿ ಪ್ರಕೃತಿ ವಿಕೋಪ ಹಾಗೂ ಬರಗಾಲದಂತಹ ಹವಾಮಾನ ಪರಿಸ್ಥಿತಿಯಿಂದ ರೈತರ ಬೆಳೆಗಳಿಗೆ ತೀವ್ರ ಹಾನಿಯಾಗಿರುವ ಹಿನ್ನೆಲೆಯಲ್ಲಿ, ರೈತರಿಗೆ ಶೀಘ್ರ ಆರ್ಥಿಕ ನೆರವು ಕಲ್ಪಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ‘ಮಧ್ಯ ಋತು ಸಂಕಷ್ಟ’ ನಿಯಮದಡಿ ಪರಿಹಾರ ಕಲ್ಪಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದರು.

ಬೆಳೆಗಳ ಬೆಳವಣಿಗೆ ಹಾಗೂ ತೇವಾಂಶದ ಕೊರತೆಯನ್ನು ನಿಖರವಾಗಿ ವಿಶ್ಲೇಷಿಸಲು ಎನ್‌ಡಿವಿಐ, ಎನ್‌ಡಿಡಬ್ಲ್ಯುಐ ಹಾಗೂ ಕೆಎಸ್‌ಎನ್‌ಎಂಡಿಸಿ ಮಳೆ ಆಧಾರಿತ ಉಪಗ್ರಹ ದತ್ತಾಂಶ ಬಳಸಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ವಿಮಾ ಕಂಪನಿ, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವು ಬಾಧಿತ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರತ್ಯಕ್ಷ ಪರಿಶೀಲನೆ ನಡೆಸಿ ಶೀಘ್ರ ವರದಿ ಸಲ್ಲಿಸಲಿದೆ. ಬೆಳೆ ಕೊಯ್ಲು ಮುಕ್ತಾಯಗೊಳ್ಳುವ ಮುನ್ನವೇ ‘ಮಧ್ಯ ಋತು ಸಂಕಷ್ಟ’ ಪ್ರಕ್ರಿಯೆ ಪೂರ್ಣಗೊಳಿಸಿ ರೈತರಿಗೆ ನ್ಯಾಯಯುತ ಪರಿಹಾರ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳ ಪ್ರಸ್ತುತ ಸ್ಥಿತಿಗತಿಯನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ. ಎನ್‌ಡಿವಿಐ ಹಾಗೂ ತೇವಾಂಶ ಸೂಚ್ಯಂಕ ಆಧಾರಿತ ಮಾಹಿತಿಯನ್ನು ಪರಿಶೀಲಿಸಿ, ‘ಮಧ್ಯ ಋತು ಸಂಕಷ್ಟ’ ಮಾರ್ಗಸೂಚಿಯಂತೆ ಸಕ್ರಿಯಗೊಳಿಸಬಹುದಾದ ಬೆಳೆ ವಿಮಾ ಘಟಕಗಳನ್ನು ಗುರುತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ ಕಂದಾಯ ಹಾಗೂ ವಿಮಾ ಕಂಪನಿಗಳೊಂದಿಗೆ ಸೇರಿ ಬೆಳೆ ಹಾನಿಯ ಪ್ರಮಾಣವನ್ನು ಸಮರ್ಪಕವಾಗಿ ಸಮೀಕ್ಷೆ ನಡೆಸಲಿದೆ. ಅರ್ಹ ರೈತರಿಗೆ ಯೋಜನೆಯ ಸೌಲಭ್ಯ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಮುಂಗಾರು ಬೆಳೆಗಳ ಪ್ರಸ್ತುತ ಸ್ಥಿತಿಗತಿ, ಬೆಳೆ ಹಾನಿಯ ಪ್ರಮಾಣ ಹಾಗೂ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ತಕ್ಷಣದ ಮಧ್ಯಂತರ ಪರಿಹಾರ ಒದಗಿಸುವ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಸಭೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಟ್ಟದ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಕೆಎಸ್‌ಎನ್‌ಎಂಡಿಸಿ ಪ್ರತಿನಿಧಿಗಳು ಹಾಗೂ ವಿಮಾ ಕಂಪನಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

“ಮಳೆ ಅಭಾವ ಅಥವಾ ದೀರ್ಘಕಾಲದ ಒಣಹವೆಯಿಂದ ಶೇ. ೫೦ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವ ಸಾಧ್ಯತೆ ಇರುವ ಪ್ರದೇಶಗಳನ್ನು ನಿಖರವಾಗಿ ಗುರುತಿಸಬೇಕು. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಮಾರ್ಗಸೂಚಿಯಂತೆ ಅರ್ಹ ರೈತರಿಗೆ ಶೇ. ೨೫ರಷ್ಟು ಮುಂಗಡ ಮಧ್ಯಂತರ ಪರಿಹಾರ ತಲುಪಿಸಲು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಹಾಗೂ ವಿಮಾ ಸಂಸ್ಥೆಗಳು ತಕ್ಷಣ ಜಂಟಿ ಕ್ಷೇತ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು.”

ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

“ಕೃಷಿ ಇಲಾಖೆ ಹಾಗೂ ವಿಮಾ ಕಂಪನಿಯ ಪ್ರತಿನಿಧಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಯಾವುದೇ ಅರ್ಹ ರೈತರು ಯೋಜನೆಯ ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು. ನೋಂದಾಯಿತ ಅರ್ಹ ರೈತರಿಗೆ ನಿಯಮಾನುಸಾರ ವಿಮಾ ಸೌಲಭ್ಯ ದೊರಕಿಸಲು ಇಲಾಖೆ ಬದ್ಧವಾಗಿದೆ.”

ಚೇತನಾ ಪಾಟೀಲ, ಜಂಟಿ ಕೃಷಿ ನಿರ್ದೇಶಕಿ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img