ರಾಂಚಿ: ಜಾರ್ಖಂಡ್ನ ರಾಮಗಢ ಜಿಲ್ಲೆಯಲ್ಲಿರುವ ಉಕ್ಕು ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೂವರು ಎಂಜಿನಿಯರ್ಗಳು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ಹೆಲಾಲ್ ಪ್ರದೇಶದಲ್ಲಿರುವ ಉಕ್ಕು ಕಾರ್ಖಾನೆಯ ಕ್ಯಾಪ್ಟಿವ್ ಪವರ್ ಪ್ಲಾಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಘಟಕದ ಇತರ ಭಾಗಗಳಿಗೂ ವ್ಯಾಪಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮಗಢ ಪೊಲೀಸ್ ವರಿಷ್ಠಾಧಿಕಾರಿ ಮುಕೇಶ್ ಕುಮಾರ್ ಲುನಾಯತ್ ಅವರ ಪ್ರಕಾರ, ಘಟನೆಯಲ್ಲಿ ಒಟ್ಟು ನಾಲ್ವರು ಉದ್ಯೋಗಿಗಳು ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಸಂಜೀವ್, ವಿನೀತ್ ಮತ್ತು ಅಭಿಷೇಕ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಬರ್ಕಾಕಾನಾ ಪೊಲೀಸ್ ಠಾಣೆಯ ಇನ್ಚಾರ್ಜ್ ಉಮಾ ಶಂಕರ್ ವರ್ಮಾ ತಿಳಿಸಿದ್ದಾರೆ.
ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಟರ್ಬೈನ್ ಅಥವಾ ಪವರ್ ಪ್ಲಾಂಟ್ನಲ್ಲಿನ ತಾಂತ್ರಿಕ ದೋಷದಿಂದ ಬೆಂಕಿ ಸಂಭವಿಸಿರಬಹುದೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಕಾರ್ಖಾನೆಯ ಕ್ಯಾಪ್ಟಿವ್ ಪವರ್ ಪ್ಲಾಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಖ್ಯ ಕಾರ್ಖಾನೆ ನಿರೀಕ್ಷಕ ಮನೀಶ್ ಸಿನ್ಹಾ ತಿಳಿಸಿದ್ದಾರೆ.
ಘಟನೆಯ ಸಮಗ್ರ ತನಿಖೆಗಾಗಿ ಕಾರ್ಖಾನೆ ನಿರೀಕ್ಷಕರು ಹಾಗೂ ಛೋಟಾನಾಗ್ಪುರ ಡೆಪ್ಯುಟಿ ಚೀಫ್ ಇನ್ಸ್ಪೆಕ್ಟರ್ ಒಳಗೊಂಡ ಇಬ್ಬರು ಸದಸ್ಯರ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅವಘಡ ಸಂಭವಿಸಿದ ವೇಳೆ ಕಾರ್ಖಾನೆಯಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಗ್ನಿ ಅವಘಡಕ್ಕೆ ಕಾರಣ, ಸುರಕ್ಷತಾ ಕ್ರಮಗಳ ಪಾಲನೆ ಹಾಗೂ ಘಟಕದಲ್ಲಿ ಸಂಭವಿಸಿದ ತಾಂತ್ರಿಕ ವೈಫಲ್ಯಗಳ ಕುರಿತು ತನಿಖಾ ತಂಡ ಪರಿಶೀಲನೆ ನಡೆಸುತ್ತಿದ್ದು, ತನಿಖೆಯ ಬಳಿಕವೇ ಬೆಂಕಿ ಅವಘಡದ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



