ಬೆಳ್ತಂಗಡಿ: 15 ವರ್ಷದ ಸುಮಂತ್ ಸಂಶಯಾಸ್ಪದ ಸಾವಿನ ಪ್ರಕರಣದ ತನಿಖೆಗೆ ಪೊಲೀಸರು ಮಹತ್ವದ ತಿರುವು ನೀಡಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಹಾಗೂ ಸಾವಿನ ಹಿಂದಿನ ನಿಗೂಢತೆ ಪತ್ತೆಹಚ್ಚಲು ನ್ಯಾಯಾಲಯದ ಅನುಮತಿ ಪಡೆದು ಬೆಂಗಳೂರಿನ ಎಫ್‌ಎಸ್‌ಎಲ್‌ನಲ್ಲಿ ಕುಟುಂಬದ ಐವರಿಗೆ ಬ್ರೈನ್ ಮ್ಯಾಪಿಂಗ್ ಹಾಗೂ ಮಂಪರು ಪರೀಕ್ಷೆ ನಡೆಸಲಾಗುತ್ತಿದೆ.
ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಮೃತ ಬಾಲಕನ ತಂದೆ ಸುಬ್ರಹ್ಮಣ್ಯ ನಾಯಕ್, ತಾಯಿ ರತ್ನಾವತಿ, ಸಹೋದರ ಸುದರ್ಶನ್, ರತ್ನಾವತಿ ಅವರ ಸಹೋದರ ರಾಧಾಕೃಷ್ಣ ಹಾಗೂ ಸಂಬಂಧಿ ಲಕ್ಷ್ಮೀನಾರಾಯಣ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಆಗಸ್ಟ್ 10ರಂದು ತಂದೆ-ತಾಯಿ ಹಾಗೂ ಸಹೋದರನನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದ್ದು, ಆಗಸ್ಟ್ 11ರಂದು ರಾಧಾಕೃಷ್ಣ ಮತ್ತು ಲಕ್ಷ್ಮೀನಾರಾಯಣ ಅವರ ಹೇಳಿಕೆ ದಾಖಲಿಸಲಾಗಿದೆ. ಈ ವೇಳೆ ಪಡೆದ ಉತ್ತರಗಳು ಮತ್ತು ಪೊಲೀಸ್ ತನಿಖೆಯಿಂದ ಸಂಗ್ರಹಿಸಿರುವ ಮಾಹಿತಿಯನ್ನು ಎಫ್‌ಎಸ್‌ಎಲ್ ತಜ್ಞರು ಪರಿಶೀಲಿಸುತ್ತಿದ್ದಾರೆ.
ಮೊದಲ ಹಂತದ ಪರೀಕ್ಷೆ ಪೂರ್ಣಗೊಂಡಿದ್ದು, ಮುಂದಿನ ಹಂತದ ಬ್ರೈನ್ ಮ್ಯಾಪಿಂಗ್‌ಗಾಗಿ ಸಂಬಂಧಪಟ್ಟವರನ್ನು ಮತ್ತೆ ಹಾಜರುಪಡಿಸುವಂತೆ ಸೂಚಿಸಲಾಗಿದೆ. ಕುಟುಂಬದ ಐವರ ವಿಚಾರಣೆ ಹಾಗೂ ಪರೀಕ್ಷೆಯ ಬಳಿಕ ಇತರ ಶಂಕಿತ ವ್ಯಕ್ತಿಗಳ ಮೇಲೂ ಇದೇ ರೀತಿಯ ವೈಜ್ಞಾನಿಕ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಸುಮಂತ್ ಸಾವು ಆರಂಭದಿಂದಲೂ ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಜನವರಿ 14ರಂದು ಬೆಳಗಿನ ಜಾವ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಆತ ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಬಳಿಕ ಮನೆ ಸಮೀಪದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿತ್ತು.
ಸಾವು ಸಹಜವಲ್ಲ ಎಂಬ ಅನುಮಾನ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸಿದ್ದರು. ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದರೂ ಈವರೆಗೆ ಪ್ರಕರಣದ ನಿಗೂಢತೆಗೆ ಸ್ಪಷ್ಟ ಉತ್ತರ ದೊರೆತಿಲ್ಲ. ಇದೀಗ ಹೇಳಿಕೆಗಳಲ್ಲಿನ ವ್ಯತ್ಯಾಸಗಳು ಹಾಗೂ ತನಿಖೆಯಿಂದ ಲಭ್ಯವಾದ ಮಾಹಿತಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸುವ ಮೂಲಕ ಪ್ರಕರಣಕ್ಕೆ ಉತ್ತರ ಕಂಡುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

