HomeMangaloreನಕಲಿ ಔಷಧಿ, ಕಲಬೆರಕೆ ಆಹಾರಕ್ಕೆ ಬ್ರೇಕ್: ಜಿಲ್ಲೆ-ತಾಲೂಕು ಮಟ್ಟದಲ್ಲಿ ‘ವಾಚ್ ಟೀಂ’ ರಚನೆಗೆ ಸರ್ಕಾರ ಸಿದ್ಧತೆ

ನಕಲಿ ಔಷಧಿ, ಕಲಬೆರಕೆ ಆಹಾರಕ್ಕೆ ಬ್ರೇಕ್: ಜಿಲ್ಲೆ-ತಾಲೂಕು ಮಟ್ಟದಲ್ಲಿ ‘ವಾಚ್ ಟೀಂ’ ರಚನೆಗೆ ಸರ್ಕಾರ ಸಿದ್ಧತೆ

For Dai;y Updates Join Our whatsapp Group

ಮಂಗಳೂರು: ನಕಲಿ ಔಷಧಿ ಜಾಲ, ಆಹಾರ ಕಲಬೆರಕೆ ಹಾಗೂ ಸ್ವಚ್ಛತಾ ಉಲ್ಲಂಘನೆಗಳ ವಿರುದ್ಧ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನಿವೃತ್ತ ಹಾಗೂ ಪರಿಣಿತ ಹಿರಿಯ ನಾಗರಿಕರನ್ನು ಒಳಗೊಂಡ ಕಾವಲು ಪಡೆ ಅಥವಾ ‘ವಾಚ್ ಟೀಂ’ಗಳನ್ನು ಪ್ರತಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಗುರುತಿಸಿ, ಸಮಗ್ರ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಮಂಗಳೂರು ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ಔಷಧಿ ಜಾಲ ಪತ್ತೆ, ಆಹಾರ ಸುರಕ್ಷತೆ ಹಾಗೂ ಸಾರ್ವಜನಿಕ ಸ್ವಚ್ಛತೆಯ ವಿಚಾರದಲ್ಲಿ ಸರ್ಕಾರದ ಕ್ರಮಗಳಿಗೆ ಜನರ ಸಹಕಾರ ಅತ್ಯಗತ್ಯ. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದರು.

ನಕಲಿ ಔಷಧಿ ಜಾಲ ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ಅನಧಿಕೃತ ಕಂಪನಿಗಳಿಂದ ಔಷಧಿಗಳು ಪೂರೈಕೆಯಾಗುತ್ತಿರುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಜನೌಷಧಿ ಕೇಂದ್ರಗಳು ಸೇರಿದಂತೆ ವಿವಿಧೆಡೆ ತಪಾಸಣೆ ಹಾಗೂ ದಾಳಿ ಮುಂದುವರಿದಿದೆ ಎಂದು ಸಚಿವರು ತಿಳಿಸಿದರು.

ಆಹಾರ ಸುರಕ್ಷತೆಯ ವಿಚಾರದಲ್ಲೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಫೈವ್‌ಸ್ಟಾರ್ ಹೋಟೆಲ್‌ಗಳಿಂದ ಹಿಡಿದು ಬೀದಿಬದಿ ಆಹಾರ ಮಳಿಗೆಗಳವರೆಗೆ ತಪಾಸಣೆ ನಡೆಸಲಾಗುತ್ತಿದೆ. ಸಾರ್ವಜನಿಕರು ದೂರು ನೀಡಿದಾಗ ಅಧಿಕಾರಿಗಳು ಕ್ರಮ ಕೈಗೊಂಡು ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಖಾದರ್ ಹೇಳಿದರು.

ತಪಾಸಣೆ ಅಥವಾ ದಾಳಿಯ ಉದ್ದೇಶ ಯಾರನ್ನೂ ಶಿಕ್ಷಿಸುವುದಲ್ಲ. ನಿಯಮ ಉಲ್ಲಂಘನೆಗಳನ್ನು ಗುರುತಿಸಿ, ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುವುದು ಸರ್ಕಾರದ ಮುಖ್ಯ ಉದ್ದೇಶ. ಈಗಾಗಲೇ ತಪಾಸಣೆ ನಡೆಸಿದ ಹಲವು ಸ್ಥಳಗಳಲ್ಲಿ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಹೋಟೆಲ್ ಅಸೋಸಿಯೇಷನ್ ಹಾಗೂ ಬೀದಿಬದಿ ಆಹಾರ ಮಾರಾಟಗಾರರನ್ನು ಜಿಲ್ಲಾ ಮಟ್ಟದಲ್ಲಿ ಸಭೆ ಕರೆದು ಆಹಾರ ಸುರಕ್ಷತೆ ಮತ್ತು ಸ್ವಚ್ಛತೆ ಕುರಿತು ತರಬೇತಿ ನೀಡಲು ನಿರ್ಧರಿಸಲಾಗಿದೆ. ಹೋಟೆಲ್‌ಗಳಲ್ಲಿ ಅಡುಗೆ ಎಣ್ಣೆಯನ್ನು ಪದೇಪದೆ ಮರುಬಳಕೆ ಮಾಡುವುದನ್ನು ತಪ್ಪಿಸಿ, ಬಳಸಿದ ಎಣ್ಣೆಯನ್ನು ಬಯೋಡೀಸೆಲ್ ತಯಾರಿಕೆಗೆ ಬಳಸುವ ಕುರಿತು ಕೂಡ ಜಾಗೃತಿ ಮೂಡಿಸಲಾಗುವುದು ಎಂದು ಸಚಿವರು ಹೇಳಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img