ಅಮರಾವತಿ (ನಂದ್ಯಾಳ): ಒಂದೇ ಕುಟುಂಬದ ಐವರು ನೇಣು ಬಿಗಿದುಕೊಂಡು ಮೃತಪಟ್ಟಿರುವ ಆಘಾತಕಾರಿ ಘಟನೆ ಶ್ರೀಶೈಲದ ವಡ್ಡೇರಾ ಪ್ರದೇಶದ ಖಾಸಗಿ ಹೋಟೆಲ್‌ನಲ್ಲಿ ಬೆಳಕಿಗೆ ಬಂದಿದೆ. ಮೃತರನ್ನು ಸುಧಾಕರ್ (36), ಗೋಗುಳ ಆದಿಲಕ್ಷ್ಮಿ (50), ಮಲ್ಲೇಶ್ವರಿ (45), ಶ್ರೀದೇವಿ (33) ಹಾಗೂ ಮಣಿಕಂಠ (15) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಬಟ್ಟಲಪಲ್ಲಿ ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ದಿನ ರೂಮ್‌ನಿಂದ ಹೊರಬಾರದ ಕುಟುಂಬ
ಜುಲೈ 28ರಂದು ಕುಟುಂಬದ ಸದಸ್ಯರು ಆಟೋದಲ್ಲಿ ಶ್ರೀಶೈಲಕ್ಕೆ ಆಗಮಿಸಿ, ವಡ್ಡೇರಾದ ಖಾಸಗಿ ಹೋಟೆಲ್‌ನಲ್ಲಿ ರೂಮ್ ಸಂಖ್ಯೆ 11ನ್ನು ಪಡೆದುಕೊಂಡಿದ್ದರು. ರೂಮ್ ಪಡೆದ ಬಳಿಕ ಸತತ ಮೂರು ದಿನಗಳಾದರೂ ಯಾರೊಬ್ಬರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿಗೆ ಅನುಮಾನ ಮೂಡಿದೆ.
ರೂಮ್‌ನ ಬಳಿ ಪರಿಶೀಲಿಸಿದಾಗ ದುರ್ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸ್ನಾನಗೃಹದಲ್ಲಿ ಐವರ ಮೃತದೇಹ
ಮಾಹಿತಿ ಪಡೆದ ಪೊಲೀಸರು ಹೋಟೆಲ್‌ಗೆ ತೆರಳಿ ಬಾಗಿಲು ತೆರೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ನಾನಗೃಹದಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರ ಮೃತದೇಹಗಳು ಪತ್ತೆಯಾಗಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಆರ್ಥಿಕ ಸಮಸ್ಯೆಯೇ ಕುಟುಂಬ ಈ ನಿರ್ಧಾರ ಕೈಗೊಳ್ಳಲು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಸಾವಿಗೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬದ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಹಾಗೂ ಸಾವಿಗೆ ಕಾರಣವಾದ ನಿಖರ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.



