ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಕ್ಕಳ ಸಂಖ್ಯೆ ಕುಸಿದ ಹಿನ್ನೆಲೆಯಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಬೀಗ ಹಾಕಿದ್ದ ಪಟ್ಟಣದ ಕೆಂಚಲಾಪುರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಗಿಲು ಕೊನೆಗೂ ಮಂಗಳವಾರ ತೆರೆದು, ಮತ್ತೆ ಮಕ್ಕಳ ಕಲರವ ಮೊಳಗಿತು. ಶಾಲೆ ಮುಚ್ಚುವ ಹಂತ ತಲುಪಿರುವ ಕುರಿತು ಶಿಕ್ಷಣ ಪ್ರೇಮಿಗಳು ಹಾಗೂ ಪೋಷಕರು ಸೋಮವಾರ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು, ಮಕ್ಕಳನ್ನು ಬೇರೆ ಶಾಲೆಗಳಿಗೆ ವರ್ಗಾಯಿಸಿದ್ದ ಪಾಲಕರ ಮನೆಗಳಿಗೆ ತೆರಳಿ ಮನವೊಲಿಸುವ ಮೂಲಕ ಐವರು ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಮೂರು ದಶಕಗಳಿಂದ ಕೆಂಚಲಾಪುರ ಬಡಾವಣೆಯ ಮಕ್ಕಳಿಗೆ ಶಿಕ್ಷಣದ ಬೆಳಕು ನೀಡುತ್ತಿದ್ದ ಈ ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ದಾಖಲಾತಿ ಸಂಖ್ಯೆ ನಿರಂತರವಾಗಿ ಕುಸಿಯುತ್ತ ಬಂದಿದೆ. ಕಳೆದ ವರ್ಷ 1ರಿಂದ 7ನೇ ತರಗತಿವರೆಗೆ ಒಟ್ಟು 26 ಮಕ್ಕಳು ದಾಖಲಾಗಿದ್ದರೆ, 2026-27ನೇ ಸಾಲಿನಲ್ಲಿ ಈ ಸಂಖ್ಯೆ ಕೇವಲ 11ಕ್ಕೆ ಇಳಿದಿತ್ತು. ಈ ಪೈಕಿ ಕೆಲವರು ಬೇರೆ ಶಾಲೆಗಳಿಗೆ ವರ್ಗಾವಣೆಯಾಗಿದ್ದರಿಂದ ಶಾಲೆಯ ಭವಿಷ್ಯದ ಬಗ್ಗೆಯೇ ಆತಂಕ ಎದುರಾಗಿತ್ತು.
ಶಿಕ್ಷಕರ ಕೊರತೆಯೂ ಶಾಲೆ ಖಾಲಿಯಾಗಲು ಕಾರಣ
ಶಾಲೆಯಲ್ಲಿದ್ದ ಇಬ್ಬರು ಶಿಕ್ಷಕರನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಎಸ್ಐಆರ್ ಕಾರ್ಯಕ್ಕೆ ನಿಯೋಜಿಸಿದ್ದರಿಂದ ಬೋಧನಾ ಚಟುವಟಿಕೆಗಳಿಗೆ ತೊಂದರೆಯಾಗಿತ್ತು. ಮಕ್ಕಳಿಗೆ ಸಮರ್ಪಕ ಶಿಕ್ಷಣ ದೊರೆಯುತ್ತಿಲ್ಲ ಎಂಬ ಕಾರಣ ನೀಡಿ ಕೆಲವು ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ದಾಖಲಿಸಿದ್ದರು. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಮತ್ತಷ್ಟು ಕುಸಿದು, ಶಾಲೆಯೇ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಅಧಿಕಾರಿಗಳು ಮಂಗಳವಾರ ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಬಳಿಕ ಬೇರೆ ಶಾಲೆಗಳಿಗೆ ಮಕ್ಕಳನ್ನು ವರ್ಗಾಯಿಸಿದ್ದ ಪಾಲಕರ ಮನೆಗಳಿಗೆ ತೆರಳಿ, ಮಕ್ಕಳನ್ನು ಇದೇ ಶಾಲೆಯಲ್ಲಿ ಮುಂದುವರಿಸುವಂತೆ ಮನವಿ ಮಾಡಿದರು.
ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಪಾಲಕರಿಂದ ಐವರು ಮಕ್ಕಳು ಮಂಗಳವಾರವೇ ಶಾಲೆಗೆ ಮರಳಿದ್ದು, ತರಗತಿಗಳು ಪುನರಾರಂಭಗೊಂಡವು.
ಎರಡು ದಿನದಲ್ಲಿ ಪರಿಣಿತ ಶಿಕ್ಷಕರ ನಿಯೋಜನೆ
ಶಾಲೆಯ ಬೋಧನಾ ಗುಣಮಟ್ಟದ ಕುರಿತು ಪಾಲಕರು ಆತಂಕಪಡುವ ಅಗತ್ಯವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ ಭರವಸೆ ನೀಡಿದರು.
ಶಾಲೆಯ ಪುನರಾರಂಭದ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಕೆ. ಹವಾಲ್ದಾರ, ಶಿಕ್ಷಣ ಸಂಯೋಜಕ ಆರ್.ಬಿ. ಜೋಶಿ, ಸಿಆರ್ಪಿಗಳಾದ ಉಮೇಶ ನೇಕಾರ, ಎನ್.ಎ. ಮುಲ್ಲಾ, ಎಸ್.ಎಚ್. ಮತ್ತೂರ, ಎಸ್ಡಿಎಂಸಿ ಅಧ್ಯಕ್ಷ ಸುಲೇಮಾನ್ ಮುಜಾವರ್, ಹೇಮಣ್ಣ ಬುರಡಿ, ತಿಪ್ಪಣ್ಣ ರೊಟ್ಟಿಗವಾಡ ಸೇರಿದಂತೆ ಶಿಕ್ಷಣ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸರ್ಕಾರಿ ಶಾಲೆಗಳನ್ನು ಬಂದ್ ಮಾಡುವ ಯಾವುದೇ ಉದ್ದೇಶ ಶಿಕ್ಷಣ ಇಲಾಖೆಗೆ ಇಲ್ಲ. ಪಾಲಕರು ಆತಂಕಪಡುವ ಅಗತ್ಯವಿಲ್ಲ. ಎರಡು ದಿನಗಳಲ್ಲಿ ಓರ್ವ ಪರಿಣಿತ ಶಿಕ್ಷಕರನ್ನು ಶಾಲೆಗೆ ನಿಯೋಜಿಸಲಾಗುವುದು. ಇಂದಿನಿಂದ ಶಾಲೆ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಉಳಿದ ಮಕ್ಕಳನ್ನೂ ಮರಳಿ ಶಾಲೆಗೆ ಕರೆತರಲು ಕ್ರಮ ಕೈಗೊಳ್ಳಲಾಗುವುದು. ಪಾಲಕರು, ಎಸ್ಡಿಎಂಸಿ ಸದಸ್ಯರು ಹಾಗೂ ಸಾರ್ವಜನಿಕರನ್ನು ಒಳಗೊಂಡ ಸಭೆ ನಡೆಸಿ, ಶಾಲೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಪಡೆಯಲಾಗುವುದು.
— ಶಿವರಾಜ ಸೀಮಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ



