ಬೆಂಗಳೂರು: ಅಭಿವೃದ್ಧಿ ಕಾರ್ಯಗಳಿಗಾಗಿ ಜಮೀನು ಕಳೆದುಕೊಳ್ಳುವ ರೈತರಿಗೆ ಮೂಲ ಪರಿಹಾರದ ಜೊತೆಗೆ ಮಾನಸಿಕ ನಷ್ಟಕ್ಕಾಗಿ (ಸೊಲಾಟಿಯಂ) ಹೆಚ್ಚುವರಿ ಪರಿಹಾರ ಪಡೆದುಕೊಳ್ಳುವ ಹಕ್ಕಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಭೂಸ್ವಾಧೀನಕ್ಕಾಗಿ ಪರಿಹಾರ ನೀಡುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಧ್ಯಸ್ಥಗಾರರು ಹೊರಡಿಸಿದ ಆದೇಶ ರದ್ದು ಮಾಡಬೇಕು ಮತ್ತು ಮಾರುಕಟ್ಟೆ ಮೌಲ್ಯದ ಪರಿಹಾರದ ಹೊರತಾಗಿಯೂ ಭಾವನಾತ್ಮಕ ಪರಿಹಾರ ಹಾಗೂ ಸ್ವಾಧೀನದ ದಿನದಿಂದ ಬಡ್ಡಿ ಪಾವತಿ ಮಾಡಬೇಕೆಂದು ಕೋರಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದ ದಿ. ಜಿ. ಸಿದ್ದರಾಮಯ್ಯ ಅವರ ವಾರಸುದಾರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಧಾರವಾಡದ ಹೈಕೋರ್ಟ್ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಭೂಮಿ ಕಳೆದುಕೊಂಡವರಿಗೂ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 23(2)ರ ಅಡಿಯಲ್ಲಿ ಮಾನಸಿಕ ನಷ್ಟ ಅಥವಾ ಭಾವನಾತ್ಮಕ ಪರಿಹಾರ ಮತ್ತು ಸೆಕ್ಷನ್ 28ರ ಅಡಿಯಲ್ಲಿ ಬಡ್ಡಿ ಪಡೆಯುವ ಕಾನೂನುಬದ್ಧ ಹಕ್ಕಿದೆ ಎಂದು ಪೀಠ ಸ್ಪಷ್ಟಪಡಿಸಿತು.
ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವ ಸಂಬಂಧದ ಆದೇಶಗಳಲ್ಲಿ ಮಾನಸಿಕ ನಷ್ಟಕ್ಕೆ ಪರಿಹಾರ ಹಾಗೂ ಬಡ್ಡಿ ನಮೂದಿಸಿಲ್ಲ ಎಂಬ ಕಾರಣಕ್ಕೆ ಅದನ್ನು ನಿರಾಕರಿಸುವುದು ಸಂವಿಧಾನದ 14 ಮತ್ತು 300-ಎ ವಿಧಿಗಳ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಆದ್ದರಿಂದ ಸಂತ್ರಸ್ತರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಭಾವನಾತ್ಮಕ ನಷ್ಟ ಮತ್ತು ಬಡ್ಡಿ ಸೌಲಭ್ಯಗಳನ್ನು ಲೆಕ್ಕಹಾಕಿ ಸೂಕ್ತ ಆದೇಶ ಹೊರಡಿಸಬೇಕು ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಗೆ ನ್ಯಾಯಾಲಯ ನಿರ್ದೇಶಿಸಿದೆ.
ಈ ಸಂಬಂಧ ಉಭಯ ಪಕ್ಷಕಾರರು ಯಾವುದೇ ನೋಟಿಫಿಕೇಶನ್ಗಾಗಿ ಕಾಯದೆ, 2026ರ ಸೆಪ್ಟೆಂಬರ್ 10ರಂದು ಮಧ್ಯಾಹ್ನ 3 ಗಂಟೆಗೆ ನೇರವಾಗಿ ವಿಶೇಷ ಭೂಸ್ವಾಧೀನ ಅಧಿಕಾರಿಯವರ ಸಮಕ್ಷಮ ಹಾಜರಾಗುವಂತೆ ಪೀಠ ಸೂಚನೆ ನೀಡಿದೆ. ಪ್ರಕರಣ ಸಂಬಂಧ ಅರ್ಜಿದಾರರ ಪರವಾಗಿ ವಕೀಲ ಸಂಕೇತ್ ಶಂಕರಪ್ಪ ಅಂಬಲಿ ವಕಾಲತ್ತು ವಹಿಸಿದ್ದರು.
ಪ್ರಕರಣದ ಹಿನ್ನೆಲೆ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದ ಜಿ. ಸಿದ್ಧರಾಮಯ್ಯ ಅವರಿಗೆ ಸೇರಿದ ಜಮೀನನ್ನು 2009ರಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಪರಿಹಾರ ಪಡೆಯುವುದಕ್ಕಾಗಿ ನಡೆಯುತ್ತಿದ್ದ ನ್ಯಾಯಾಂಗ ಪ್ರಕ್ರಿಯೆ ನಡುವೆ ಸಿದ್ದರಾಮಯ್ಯ ಮೃತಪಟ್ಟಿದ್ದು, ಅವರ ವಾರಸುದಾರರು ಕಾನೂನು ಪ್ರಕ್ರಿಯೆ ಮುಂದುವರೆಸಿ, ವಿಶೇಷ ಭೂಸ್ವಾಧೀನ ಅಧಿಕಾರಿ ನಿಗದಿಪಡಿಸಿದ್ದ ಪರಿಹಾರ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.



