HomeKarnataka Newsರೇಷನ್‌ಗೆ ಕೊನೆಯ ದಿನವೇ ಸರ್ವರ್ ಕೈಕೊಟ್ಟಿತು; ಬೆಳಗಾವಿಯಲ್ಲಿ ಪಡಿತರಕ್ಕಾಗಿ ಜನರ ಪರದಾಟ

ರೇಷನ್‌ಗೆ ಕೊನೆಯ ದಿನವೇ ಸರ್ವರ್ ಕೈಕೊಟ್ಟಿತು; ಬೆಳಗಾವಿಯಲ್ಲಿ ಪಡಿತರಕ್ಕಾಗಿ ಜನರ ಪರದಾಟ

For Dai;y Updates Join Our whatsapp Group

ಬೆಳಗಾವಿ: ಜಿಲ್ಲೆಯಾದ್ಯಂತ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸರ್ವರ್ ಸಮಸ್ಯೆ ತಲೆದೋರಿದ್ದು, ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರ ಪಡೆಯಲು ಬಂದಿರುವ ಕಾರ್ಡುದಾರರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.

ಇಂದು ಪಡಿತರ ವಿತರಣೆಗಾಗಿ ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು, ಯರಗಟ್ಟಿ ತಾಲೂಕಿನ ಮುಗಳಿಹಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಪಡಿತರ ಪಡೆಯಲು ಬೆಳಗ್ಗೆಯಿಂದಲೇ ಜನರು ನ್ಯಾಯಬೆಲೆ ಅಂಗಡಿಗಳ ಮುಂದೆ ಜಮಾಯಿಸಿದ್ದಾರೆ. ಆದರೆ ಸರ್ವರ್ ಸಂಪರ್ಕ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ವಿತರಣಾ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಸರ್ಕಾರ ಬಯೋಮೆಟ್ರಿಕ್ ಆಧಾರಿತ ಪಡಿತರ ವಿತರಣೆಯನ್ನು ಕಡ್ಡಾಯಗೊಳಿಸಿದೆ. ಆದರೆ ತಾಂತ್ರಿಕ ದೋಷದಿಂದಾಗಿ ಬಯೋಮೆಟ್ರಿಕ್ ಯಂತ್ರದಲ್ಲಿ ಕಾರ್ಡುದಾರರ ಹೆಬ್ಬೆರಳಿನ ಗುರುತು ಸರಿಯಾಗಿ ಸ್ವೀಕರಿಸುತ್ತಿಲ್ಲ. ಇದರಿಂದ ಒಬ್ಬೊಬ್ಬ ಕಾರ್ಡುದಾರರ ಪಡಿತರ ವಿತರಿಸಲು ಹೆಚ್ಚಿನ ಸಮಯ ಬೇಕಾಗುತ್ತಿದೆ.

ಶೇ.50ರಷ್ಟು ಕಾರ್ಡುದಾರರಿಗೆ ಮಾತ್ರ ಪಡಿತರ:

ಸರ್ವರ್ ಹಾಗೂ ಬಯೋಮೆಟ್ರಿಕ್ ಸಮಸ್ಯೆಯಿಂದಾಗಿ ಜಿಲ್ಲೆಯ ಹಲವು ಭಾಗಗಳಲ್ಲಿ ಇದುವರೆಗೆ ಸುಮಾರು ಶೇ.50ರಷ್ಟು ಕಾರ್ಡುದಾರರಿಗೆ ಮಾತ್ರ ಪಡಿತರ ವಿತರಿಸಲಾಗಿದೆ ಎನ್ನಲಾಗಿದೆ. ಉಳಿದ ಕಾರ್ಡುದಾರರು ಕಳೆದ ನಾಲ್ಕೈದು ದಿನಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುತ್ತಿದ್ದರೂ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ.

ಇಂದು ಪಡಿತರ ಪಡೆಯಲು ಕೊನೆಯ ದಿನವಾಗಿರುವುದರಿಂದ ಉಳಿದ ಕಾರ್ಡುದಾರರಲ್ಲಿ ಆತಂಕ ಹೆಚ್ಚಾಗಿದೆ. ಒಂದೇ ದಿನದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪಡಿತರ ಪಡೆಯಲು ಮುಂದಾಗಿರುವ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮುಂದೆ ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ.

ಕೂಲಿ ಕೆಲಸಕ್ಕೂ ಹೋಗಲಾಗದೆ ಸಂಕಷ್ಟ:

ಪಡಿತರಕ್ಕಾಗಿ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿಯಿಂದ ಕೂಲಿ ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

“ಪಡಿತರ ಪಡೆಯಲು ಬೆಳಗ್ಗೆಯಿಂದಲೇ ಅಂಗಡಿಯ ಮುಂದೆ ನಿಂತಿದ್ದೇವೆ. ಸರ್ವರ್ ಸರಿಯಾಗಿ ಕೆಲಸ ಮಾಡದ ಕಾರಣ ಗಂಟೆಗಟ್ಟಲೆ ಕಾಯಬೇಕಾಗಿದೆ. ಇದರಿಂದ ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಒಂದು ದಿನದ ಸಂಪಾದನೆಯೂ ಕೈತಪ್ಪುತ್ತಿದೆ” ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ:

ಸರ್ವರ್ ಸಮಸ್ಯೆ ಹಲವು ದಿನಗಳಿಂದ ಮುಂದುವರಿದಿದ್ದರೂ ತಾಂತ್ರಿಕ ದೋಷವನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪಡಿತರ ವಿತರಣೆಗೆ ಕೊನೆಯ ದಿನ ಸಮೀಪಿಸುತ್ತಿದ್ದರೂ ಸಮಸ್ಯೆ ಬಗೆಹರಿಯದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಡಿತರ ಪಡೆಯಲು ಅರ್ಹರಾಗಿರುವ ಯಾವುದೇ ಕಾರ್ಡುದಾರರು ತಾಂತ್ರಿಕ ಸಮಸ್ಯೆಯಿಂದ ವಂಚಿತರಾಗಬಾರದು. ಕೂಡಲೇ ಸರ್ವರ್ ಸಮಸ್ಯೆ ಹಾಗೂ ಬಯೋಮೆಟ್ರಿಕ್ ತಾಂತ್ರಿಕ ದೋಷವನ್ನು ಸರಿಪಡಿಸಿ, ಬಾಕಿ ಉಳಿದಿರುವ ಎಲ್ಲ ಕಾರ್ಡುದಾರರಿಗೆ ಪಡಿತರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸದ್ಯ ಜಿಲ್ಲೆಯ ವಿವಿಧೆಡೆ ನ್ಯಾಯಬೆಲೆ ಅಂಗಡಿಗಳ ಮುಂದೆ ಜನರು ಪಡಿತರಕ್ಕಾಗಿ ಕಾಯುತ್ತಿದ್ದು, ಸಮಸ್ಯೆಯನ್ನು ಅಧಿಕಾರಿಗಳು ಎಷ್ಟು ಬೇಗ ಬಗೆಹರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img