HomeKarnataka Newsಪತಿಗೆ ಕಿರುಕುಳ, ಪ್ರತ್ಯೇಕ ವಾಸ: ದಂಪತಿಗೆ ವಿಚ್ಛೇದನ ಮಂಜೂರು ಮಾಡಿದ ಹೈಕೋರ್ಟ್; 17 ಲಕ್ಷ ಜೀವನಾಂಶಕ್ಕೆ...

ಪತಿಗೆ ಕಿರುಕುಳ, ಪ್ರತ್ಯೇಕ ವಾಸ: ದಂಪತಿಗೆ ವಿಚ್ಛೇದನ ಮಂಜೂರು ಮಾಡಿದ ಹೈಕೋರ್ಟ್; 17 ಲಕ್ಷ ಜೀವನಾಂಶಕ್ಕೆ ಆದೇಶ

For Dai;y Updates Join Our whatsapp Group

ಬೆಂಗಳೂರು: ಪದೇ ಪದೇ ಪತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದು ಮತ್ತು ಸುದೀರ್ಘ ಅವಧಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತ್ನಿಯ ವರ್ತನೆಯನ್ನು ಪರಿಗಣಿಸಿದ ಹೈಕೋರ್ಟ್, ದಂಪತಿಗೆ ವಿಚ್ಛೇದನ ಮಂಜೂರು ಮಾಡಿ ಆದೇಶಿಸಿದೆ.

ಇದರೊಂದಿಗೆ ಪತ್ನಿಗೆ 17 ಲಕ್ಷ ರೂಪಾಯಿ ಶಾಶ್ವತ ಜೀವನಾಂಶ ಪಾವತಿಸುವಂತೆಯೂ ಪತಿಗೆ ನ್ಯಾಯಾಲಯ ಸೂಚಿಸಿದೆ. ವಿಚ್ಛೇದನ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಮೈಸೂರಿನ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೈಸೂರು ನಿವಾಸಿ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಸಾಕ್ಷ್ಯಾಧಾರ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರ ಪತಿ ಪತ್ನಿಯಿಂದ ಕ್ರೌರ್ಯಕ್ಕೆ ಒಳಗಾಗಿರುವುದು ಮತ್ತು 2017ರಿಂದ ಪತ್ನಿ ಸೂಕ್ತ ಕಾರಣವಿಲ್ಲದೆ ಪತಿಯನ್ನು ತ್ಯಜಿಸಿ ಪ್ರತ್ಯೇಕವಾಗಿ ವಾಸಿಸುತ್ತಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಇರುವುದನ್ನು ಮಕ್ಕಳೇ ಕಂಡಿದ್ದು, ಈ ವಿಚಾರವನ್ನು ಪತಿಗೆ ತಿಳಿಸದಂತೆ ಪತ್ನಿ ಮಕ್ಕಳಿಗೆ ಎಚ್ಚರಿಕೆ ನೀಡಿದ್ದ ಅಂಶವನ್ನೂ ಪೀಠ ಪ್ರಸ್ತಾಪಿಸಿದೆ. ವಿಚಾರಣಾ ನ್ಯಾಯಾಲಯ ಈ ಎಲ್ಲ ದಾಖಲೆಗಳನ್ನು ಪರಿಗಣಿಸುವಲ್ಲಿ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದ ಪೀಠ, ಸುದೀರ್ಘ ಕಾನೂನು ಹೋರಾಟಕ್ಕೆ ಶಾಶ್ವತವಾಗಿ ತೆರೆ ಎಳೆಯುವ ನಿಟ್ಟಿನಲ್ಲಿ ಪತ್ನಿಯ ನಿರ್ವಹಣೆಗಾಗಿ ಸೆಕ್ಷನ್ 25ರ ಅಡಿ 17,00,000 ರೂಪಾಯಿ ಖಾಯಂ ಜೀವನಾಂಶ ನೀಡುವಂತೆ ಆದೇಶಿಸಿದೆ. ಈ ಮೊತ್ತವನ್ನು ತೀರ್ಪು ಹೊರಬಿದ್ದ 8 ವಾರಗಳ ಒಳಗೆ ಪತ್ನಿಯ ಖಾತೆಗೆ ಪಾವತಿಸಬೇಕೆಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಪತಿ ಮತ್ತು ಪ್ರತಿವಾದಿ ಪತ್ನಿಗೆ 2004ರ ಡಿಸೆಂಬರ್ 20ರಂದು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಗೌಡ ಸಮಾಜದ ಸಂಪ್ರದಾಯದಂತೆ ವಿವಾಹ ನೆರವೇರಿತ್ತು. ವಿವಾಹದ ಬಳಿಕ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದರು. ಮದುವೆಯಾದ ಒಂದು ವರ್ಷದವರೆಗೆ ಸಂಸಾರ ಸುಖಕರವಾಗಿತ್ತಾದರೂ, ಬಳಿಕ ಪ್ರತಿವಾದಿ ಪತ್ನಿ ಮನೆಯಲ್ಲಿ ಅನಗತ್ಯ ಗಲಾಟೆ ಆರಂಭಿಸಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಹಲವು ಬಾರಿ ಉದ್ಯೋಗ ಬದಲಿಸಿದ್ದ ಪತ್ನಿ, ಮಕ್ಕಳಿದ್ದರೂ ಅವರನ್ನು ಬಿಟ್ಟು ಮನೆ ತೊರೆದು ಹೋಗುತ್ತಿದ್ದರು ಎಂದೂ, ಇದನ್ನು ಪ್ರಶ್ನಿಸಿದಾಗ ಸಬೂಬು ನೀಡುತ್ತಿದ್ದರು ಎಂದೂ ದೂರಲಾಗಿದೆ.

ಪತ್ನಿಯ ಒತ್ತಾಯದ ಮೇರೆಗೆ ಪತಿ ಕಾರು ಮತ್ತು ದ್ವಿಚಕ್ರವಾಹನ ಖರೀದಿಸಿದ್ದರು. ಬಳಿಕ ಪತ್ನಿ ಕಾರು ತೆಗೆದುಕೊಂಡು ಇಚ್ಛಿಸಿದಲ್ಲಿಗೆ ತೆರಳುತ್ತಿದ್ದರು ಎಂದೂ, ಪ್ರಶ್ನಿಸಿದಾಗ ಬೆದರಿಕೆ ಒಡ್ಡುತ್ತಿದ್ದರು ಎಂದೂ ಆರೋಪಿಸಲಾಗಿತ್ತು. ಸುಳ್ಳು ದೂರುಗಳ ಮೂಲಕ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಹಲವು ಬಾರಿ ದೂರು ದಾಖಲಾಗಿ ರಾಜಿ ಸಂಧಾನದ ಮೂಲಕ ಪತ್ನಿ ಮತ್ತೆ ಮನೆಗೆ ಮರಳುತ್ತಿದ್ದರೂ, ಪ್ರತ್ಯೇಕ ಆಹಾರ ಸಿದ್ಧಪಡಿಸಿಕೊಂಡು ಪತಿ ಹಾಗೂ ಮಕ್ಕಳಿಂದ ದೂರವೇ ಇರುತ್ತಿದ್ದರು. ಈ ಎಲ್ಲ ಕಾರಣಗಳಿಂದ ಅರ್ಜಿದಾರರು ವಿಚ್ಛೇದನ ಕೋರಿ ಮೈಸೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1)(1ಎ) (ಕ್ರೌರ್ಯ) ಮತ್ತು 13(1)(1ಬಿ) (ಪರಿತ್ಯಾಗ) ಅಡಿ ಸಲ್ಲಿಸಲಾಗಿದ್ದ ವಿಚ್ಛೇದನ ಅರ್ಜಿಯನ್ನು ಮೈಸೂರಿನ ಪ್ರಥಮ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯ 2019ರ ಫೆಬ್ರುವರಿ 11ರಂದು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ 2019ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಸ್ತುತ 20 ಮತ್ತು 18 ವರ್ಷದ ಇಬ್ಬರು ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಇತರೆ ನಿರ್ವಹಣೆಯನ್ನು ಪತಿಯೇ ಸಂಪೂರ್ಣ ನೋಡಿಕೊಳ್ಳುತ್ತಿದ್ದಾರೆ ಎಂದೂ, ಹಿರಿಯ ಮಗಳು ಎಂಜಿನಿಯರಿಂಗ್ ಹಾಗೂ ಕಿರಿಯ ಮಗಳು ಪಿಯುಸಿ ಪೂರ್ಣಗೊಳಿಸಿದ್ದು ಆರ್ಥಿಕ ನೆರವಿನ ಅಗತ್ಯವಿದೆ ಎಂದೂ ನ್ಯಾಯಪೀಠದ ಗಮನಕ್ಕೆ ತಂದರು.

ಪತಿಯೊಂದಿಗೆ ಸೇರಿ ಬಾಳಲು ಸಿದ್ಧವಿರುವುದಾಗಿ ಪತ್ನಿ ತಿಳಿಸಿದ್ದರೂ, ತಿಂಗಳಿಗೆ 40,000 ರೂಪಾಯಿ ಮಧ್ಯಂತರ ಜೀವನಾಂಶ ಕೋರಿದ್ದರು. ಪ್ರತಿವಾದಿ ಪತ್ನಿಯ ಪರ ವಕೀಲರು ಮೇಲ್ಮನವಿಯಲ್ಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img