ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ನಟ ಪ್ರಮೋದ್ ಶೆಟ್ಟಿ ಅವರ ಜನ್ಮದಿನದ ಅಂಗವಾಗಿ ಬಹುನಿರೀಕ್ಷಿತ ‘ಕೌಸ್ತುಭ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಹೊಸ ಲುಕ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
ಈಗಾಗಲೇ ಹಲವು ಪೋಷಕ, ಖಳ ಹಾಗೂ ಪ್ರಧಾನ ಪಾತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪ್ರಮೋದ್ ಶೆಟ್ಟಿ ಅವರು ‘ಕೌಸ್ತುಭ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟರ ಸಾಲಿಗೆ ಸೇರುವ ಭರವಸೆ ಇದೆ ಎಂದು ಚಿತ್ರದ ನಿರ್ದೇಶಕ ಸಿದ್ದು ವಜ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
‘ಕೌಸ್ತುಭ’ ಒಂದು ಪತ್ತೇದಾರಿ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಕಥೆಯ ಹಲವು ಪ್ರಮುಖ ಅಂಶಗಳನ್ನು ಈಗಲೇ ಬಹಿರಂಗಪಡಿಸುವುದು ಸಾಧ್ಯವಿಲ್ಲ ಎಂದು ಚಿತ್ರತಂಡ ತಿಳಿಸಿದೆ. ಆದರೆ, ಚಿತ್ರದಲ್ಲಿನ ಪೊಲೀಸ್ ಪಾತ್ರ ಹಾಗೂ ಕ್ಲೈಮ್ಯಾಕ್ಸ್ ವಿಭಿನ್ನವಾಗಿರಲಿದೆ ಎಂದು ನಾಯಕ ನಟ ಪ್ರಮೋದ್ ಶೆಟ್ಟಿ ಹೇಳಿದ್ದಾರೆ.
ಇದುವರೆಗೆ ತಮ್ಮ ಹಲವು ಪಾತ್ರಗಳಲ್ಲಿ ಹಾಸ್ಯದ ಛಾಯೆಯನ್ನೂ ಪ್ರದರ್ಶಿಸಿದ್ದ ಪ್ರಮೋದ್ ಶೆಟ್ಟಿ, ಈ ಚಿತ್ರದಲ್ಲಿ ‘ಚಾಣಕ್ಯ’ ಎಂಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಸಾಹಸ ದೃಶ್ಯಗಳಿದ್ದು, ಇದು ಪ್ರಮೋದ್ ಶೆಟ್ಟಿ ನಾಯಕ ನಟರಾಗಿ ಅಭಿನಯಿಸುತ್ತಿರುವ ಮೊದಲ ಕಮರ್ಷಿಯಲ್ ಚಿತ್ರವಾಗಿದೆ.
ನಿರ್ದೇಶಕ ಸಿದ್ದು ವಜ್ರಪ್ಪ ಅವರಿಗೆ ಇದು ಎರಡನೇ ಚಿತ್ರವಾಗಿದೆ. ಕಳೆದ ವರ್ಷ ಪ್ರಯೋಗಾತ್ಮಕ ಚಿತ್ರವೊಂದನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಅವರು, ಇದೀಗ ‘ಕೌಸ್ತುಭ’ ಚಿತ್ರದ ಮೂಲಕ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಚಿತ್ರದ ಈಗಾಗಲೇ ಸುಮಾರು ಶೇ.60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಒಂದು ಹಾಡನ್ನು ನಿರ್ದೇಶಕ ಸಿದ್ದು ವಜ್ರಪ್ಪ ಅವರೇ ರಚಿಸಿದ್ದಾರೆ. ಮತ್ತೊಂದು ಗೀತೆಯನ್ನು ಪ್ರಶಾಂತ್ ಬಾಗೂರು ಬರೆದಿದ್ದಾರೆ. ನಾಯಕನ ಪ್ರವೇಶಕ್ಕಾಗಿ ವಿಶೇಷ ಹಾಡೊಂದನ್ನು ಸಿದ್ಧಪಡಿಸಲಾಗುತ್ತಿದ್ದು, ಒಂದು ಗೀತೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಡಲಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ ಡಾಸ್ ಮೋಡ್ ಸಂಗೀತ ನಿರ್ದೇಶನವಿದೆ.
ಚಿತ್ರದಲ್ಲಿ ಹಿರಿಯ ನಟ ಹಾಗೂ ನಿರ್ದೇಶಕ ಟಿ.ಎಸ್. ನಾಗಾಭರಣ, ರವಿಶಂಕರ್ ಗೌಡ, ಕಿರುತೆರೆ ನಟಿ ವಿದ್ಯಾ, ಕಡ್ಡಿಪುಡಿ ಚಂದ್ರು ಸೇರಿದಂತೆ ದೊಡ್ಡ ತಾರಾಗಣವೇ ಇದೆ. ‘ರಾಮಾ ರಾಮಾ ರೇ’ ಖ್ಯಾತಿಯ ನಟರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರಕ್ಕೆ ಅರವಿಂದ್ ರಾಜ್ ಸಂಕಲನ, ದಿಲೀಪ್ ಎಂ. ರಾಜ್ ಸಾಹಸ ನಿರ್ದೇಶನವಿದೆ. ಎವಿಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ರಾಜೇಶ್ ಧನಪಾಲ್ ಬಂಡವಾಳ ಹೂಡಿದ್ದಾರೆ. ಚಿತ್ರದ ಪ್ರಚಾರ ಕಾರ್ಯವನ್ನು ಪಿಆರ್‌ಒ ರಮಿತ್ ಏಲಕ್ಕಿ, ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ ಹಂಡಿಗಿ ನಿರ್ವಹಿಸುತ್ತಿದ್ದಾರೆ.



