ವಿಜಯಸಾಕ್ಷಿ ಸುದ್ದಿ, ವಿಜಯಪುರ: ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ಭಕ್ತರಲ್ಲಿ ಅಚ್ಚರಿ ಮತ್ತು ಭಕ್ತಿಭಾವ ಮೂಡಿಸಿರುವ ಅಪರೂಪದ ಘಟನೆಯೊಂದು ನಡೆದಿದೆ. ಹಾಲುಮತ ಗುರುಪೀಠದ ಗುರು, ಪವಾಡ ಪುರುಷರೆಂದೇ ಭಕ್ತರಿಂದ ಆರಾಧಿಸಲ್ಪಡುತ್ತಿದ್ದ ಶ್ರೀ ಮಲ್ಲಯ್ಯ ಸರೂರ ಮುತ್ಯಾರ ಅವರ ಅಂತ್ಯಕ್ರಿಯೆ ನಡೆದು ಎಂಟು ತಿಂಗಳು ಕಳೆದಿದ್ದರೂ, ಸಮಾಧಿಯಿಂದ ಹೊರತೆಗೆದ ವೇಳೆ ಅವರ ದೇಹದಲ್ಲಿ ಯಾವುದೇ ಹಾನಿಯಾಗಿಲ್ಲ ಎಂಬುದು ಭಕ್ತರನ್ನು ಬೆರಗುಗೊಳಿಸಿದೆ. ದೈವವಾಣಿಯಂತೆ ಗುರುವಾರ ಸಮಾಧಿಯಿಂದ ದೇಹವನ್ನು ಹೊರತೆಗೆದು, ವಿಜೃಂಭಣೆಯ ಮೆರವಣಿಗೆ ನಡೆಸಿ ಮರು ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅನಾರೋಗ್ಯದಿಂದ ಬಳಲುತ್ತಿದ್ದ ಪವಾಡ ಪುರುಷ ಶ್ರೀ ಮಲ್ಲಯ್ಯ ಸರೂರ ಮುತ್ಯಾರ ಅವರು 2025ರ ಡಿಸೆಂಬರ್ 31ರಂದು ಲಿಂಗೈಕ್ಯರಾಗಿದ್ದರು. ಮರುದಿನ 2026ರ ಜನವರಿ 1ರಂದು ಮನಗೂಳಿ ಪಟ್ಟಣದ ಹೊರವಲಯದ ಚೌಕಿಮಠದ ಬಳಿ ಶಾಸ್ತ್ರೋಕ್ತವಾಗಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಆದರೆ, ಅಂತ್ಯಕ್ರಿಯೆ ನಡೆದ ಎಂಟು ತಿಂಗಳು ಎರಡು ದಿನಗಳ ಬಳಿಕ ಸಮಾಧಿಯಲ್ಲಿದ್ದ ಶ್ರೀಗಳ ದೇಹವನ್ನು ಮತ್ತೊಮ್ಮೆ ಹೊರತೆಗೆದು ಮರು ಅಂತ್ಯಕ್ರಿಯೆ ನೆರವೇರಿಸಲು ಭಕ್ತರು ಮುಂದಾದರು. ಗುರುವಾರ ನಸುಕಿನ ಜಾವ ಸಮಾಧಿಯನ್ನು ತೆರೆಯಿಸಿ ದೇಹವನ್ನು ಹೊರತೆಗೆದ ಸಂದರ್ಭದಲ್ಲಿ, ಇಷ್ಟೊಂದು ತಿಂಗಳು ಕಳೆದಿದ್ದರೂ ದೇಹಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂಬುದು ಕಂಡುಬಂದಿದೆ ಎಂದು ಭಕ್ತರು ತಿಳಿಸಿದ್ದಾರೆ. ಈ ದೃಶ್ಯ ಕಂಡ ಭಕ್ತರು ಅಚ್ಚರಿ ವ್ಯಕ್ತಪಡಿಸಿ, ಇದನ್ನು ಶ್ರೀಗಳ ಪವಾಡವೆಂದು ಭಕ್ತಿಪೂರ್ವಕವಾಗಿ ನಂಬಿದ್ದಾರೆ.
ದೈವವಾಣಿಯಂತೆ ಮರು ಅಂತ್ಯಕ್ರಿಯೆ
ಸಮಾಧಿಯಲ್ಲಿದ್ದ ದೇಹವನ್ನು ಹೊರತೆಗೆಯಲು ಕಾರಣವಾಗಿದ್ದು ದೈವವಾಣಿಯೆಂದು ಭಕ್ತರು ತಿಳಿಸಿದ್ದಾರೆ. ಇತ್ತೀಚೆಗೆ ಲಾಯವ್ವ ಎಂಬ ಭಕ್ತೆಯ ಮೈಮೇಲೆ ಶ್ರೀ ಮಲ್ಲಯ್ಯ ಸರೂರ ಮುತ್ಯಾರ ಅವರ ದೈವಶಕ್ತಿ ಬಂದಿತ್ತೆಂದು ಹೇಳಲಾಗಿದ್ದು, ಆ ವೇಳೆ “ಸಮಾಧಿಯಲ್ಲಿ ನನ್ನ ದೇಹ ಹಾಗೆಯೇ ಇದೆ. ಅದನ್ನು ಹೊರತೆಗೆದು ಶ್ರಾವಣ ಮಾಸದಲ್ಲಿ ಬೀರಲಿಂಗೇಶ್ವರ ದೇವಸ್ಥಾನದ ಗದ್ದುಗೆ ಪಕ್ಕದಲ್ಲಿ ಮರು ಅಂತ್ಯಕ್ರಿಯೆ ನೆರವೇರಿಸಿ. ಹೀಗೆ ಮಾಡಿದರೆ ನಾಡಿಗೆ ಬಂದಿರುವ ಬರಗಾಲ ನೀಗಿ, ಮಳೆ-ಬೆಳೆಯಾಗಿ ಎಲ್ಲರಿಗೂ ಒಳಿತಾಗಲಿದೆ” ಎಂದು ದೈವವಾಣಿ ಕೇಳಿಬಂದಿತ್ತೆಂದು ಭಕ್ತರು ತಿಳಿಸಿದ್ದಾರೆ.
ಈ ದೈವವಾಣಿಯಂತೆ ಗುರುವಾರ ನಸುಕಿನ ಜಾವ ಭಕ್ತರು ಸಮಾಧಿಯಿಂದ ಶ್ರೀಗಳ ದೇಹವನ್ನು ಹೊರತೆಗೆದು, ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಬಳಿಕ ಬೀರಲಿಂಗೇಶ್ವರ ದೇವಸ್ಥಾನದ ಗದ್ದುಗೆ ಸಮೀಪ ದೈವವಾಣಿಯಂತೆ ಮರು ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಜಾತ್ರೆಯ ವಾತಾವರಣದಲ್ಲಿ ಭವ್ಯ ಮೆರವಣಿಗೆ
ಮನಗೂಳಿ ಪಟ್ಟಣದಲ್ಲಿ ಡೊಳ್ಳು ಕುಣಿತ, ಸುಮಂಗಲಿಯರ ಕುಂಭಮೇಳ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳೊಂದಿಗೆ ಶ್ರೀಗಳ ದೇಹದ ವಿಜೃಂಭಣೆಯ ಮೆರವಣಿಗೆ ನಡೆಯಿತು. ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು. ಪಟ್ಟಣದಾದ್ಯಂತ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.
ಈ ಹಿಂದೆ ಬರಗಾಲದ ಸಂದರ್ಭದಲ್ಲಿ ಶ್ರೀ ಮಲ್ಲಯ್ಯ ಸರೂರ ಮುತ್ಯಾರ ಅವರು ಮುಳ್ಳಿನ ಕಂಟೆಯ ಮೇಲೆ ನಿಂತು ಮಳೆ ತರಿಸುವ ಪವಾಡ ಮಾಡಿದ್ದರು ಎಂಬ ನಂಬಿಕೆ ಭಕ್ತರಲ್ಲಿದೆ. ಇದೀಗ ಅವರ ದೈವವಾಣಿಯಂತೆ ಮರು ಅಂತ್ಯಕ್ರಿಯೆ ನೆರವೇರಿಸಿರುವುದರಿಂದ ನಾಡಿನಲ್ಲಿ ಬರಗಾಲ ನೀಗಿ, ಉತ್ತಮ ಮಳೆ-ಬೆಳೆಯಾಗಿ ಸುಭಿಕ್ಷೆ ನೆಲೆಸಲಿದೆ ಎಂಬ ಭರವಸೆಯನ್ನು ಭಕ್ತರು ವ್ಯಕ್ತಪಡಿಸಿದ್ದಾರೆ.
ಶ್ರೀಗಳ ದೈವವಾಣಿಯಂತೆ ಮರು ಅಂತ್ಯಕ್ರಿಯೆ ನೆರವೇರಿಸಿದ್ದೇವೆ. ಅವರ ಆಶೀರ್ವಾದದಿಂದ ನಾಡಿನ ಬರಗಾಲ ದೂರವಾಗಿ, ಮಳೆ-ಬೆಳೆಯಾಗಿ ಜನಜೀವನ ಸುಖಮಯವಾಗಲಿದೆ ಎಂಬುದು ನಮ್ಮ ಅಚಲ ನಂಬಿಕೆ ಎಂದು ಭಕ್ತರು ತಿಳಿಸಿದ್ದಾರೆ.



