HomeUncategorizedಹಕ್ಕುಪತ್ರ ನೀಡಿ 13 ವರ್ಷವಾದರೂ ನಿವೇಶನ ಹಂಚಿಕೆ ಇಲ್ಲ: ಬಡ ಕುಟುಂಬಗಳ ಆಕ್ರೋಶ

ಹಕ್ಕುಪತ್ರ ನೀಡಿ 13 ವರ್ಷವಾದರೂ ನಿವೇಶನ ಹಂಚಿಕೆ ಇಲ್ಲ: ಬಡ ಕುಟುಂಬಗಳ ಆಕ್ರೋಶ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ರೋಣ: ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಹಕ್ಕುಪತ್ರ ಪಡೆದಿದ್ದರೂ ಕಳೆದ ಸುಮಾರು ೧೩ ವರ್ಷಗಳಿಂದ ನಿವೇಶನ ಹಂಚಿಕೆಯಾಗದೆ ನೂರಾರು ಬಡ ಕುಟುಂಬಗಳು ಸಂಕಷ್ಟದಲ್ಲಿದ್ದು, ಕೂಡಲೇ ಅರ್ಹ ಫಲಾನುಭವಿಗಳಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕೆಂದು ರೋಣ ತಾಲೂಕು ಸ್ಲಂ ಸಮಿತಿ ಆಗ್ರಹಿಸಿದೆ.

ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿಯ ಸಹಕಾರದಲ್ಲಿ ರೋಣ ತಾಲೂಕು ಸ್ಲಂ ಸಮಿತಿ ನೇತೃತ್ವದಲ್ಲಿ ನೂರಾರು ನಿವಾಸಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ರೋಣ ಪಟ್ಟಣದಲ್ಲಿ ೨೦೧೩ರಲ್ಲಿ ನೂರಾರು ಬಡ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಅಂದಿನ ತಹಶೀಲ್ದಾರ್ ಅವರು ದಿನಾಂಕ ೭-೨-೨೦೧೩ರಂದು ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿದ್ದರು. ಆದರೆ ಇಂದಿಗೂ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ ಎಂದು ಸಮಿತಿ ಮುಖಂಡರು ಆರೋಪಿಸಿದರು.

ಹಕ್ಕುಪತ್ರವಿದೆ; ನಿವೇಶನದ ಜಾಗವೇ ಗೊತ್ತಿಲ್ಲ!

ಹಕ್ಕುಪತ್ರಗಳಲ್ಲಿ ರೋಣ ಪಟ್ಟಣದ ಯಾವ ಸರ್ವೇ ಸಂಖ್ಯೆಯಲ್ಲಿ ನಿವೇಶನ ಮಂಜೂರು ಮಾಡಲಾಗಿದೆ ಎಂಬ ವಿವರ ನಮೂದಿಸದಿರುವುದರಿಂದ ಫಲಾನುಭವಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಗುಡಿಸಲು ಪ್ರದೇಶಗಳು ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಅನೇಕ ಕುಟುಂಬಗಳು ವಸತಿ ಸೌಲಭ್ಯಕ್ಕಾಗಿ ದಶಕಗಳಿಂದ ಕಾಯುತ್ತಿವೆ ಎಂದು ತಾಲೂಕು ಸ್ಲಂ ಸಮಿತಿ ಅಧ್ಯಕ್ಷ ಬಸವರಾಜ ಕುರಿ ತಿಳಿಸಿದರು.

ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ ಮಾತನಾಡಿ, ರೋಣ ಪಟ್ಟಣದಲ್ಲಿ ಹಲವು ದಶಕಗಳಿಂದ ಸರ್ಕಾರಿ ಹಾಗೂ ಖಾಸಗಿ ಜಾಗಗಳಲ್ಲಿ ಗುಡಿಸಲು ನಿರ್ಮಿಸಿಕೊಂಡು ನೂರಾರು ಕುಟುಂಬಗಳು ವಾಸಿಸುತ್ತಿವೆ. ಈ ಪ್ರದೇಶಗಳನ್ನು ಕರ್ನಾಟಕ ಸ್ಲಂ ಕಾಯ್ದೆ-೧೯೭೩ರ ಅಡಿಯಲ್ಲಿ ಗುರುತಿಸಿ ಅಗತ್ಯ ವಸತಿ ಹಾಗೂ ಮೂಲಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಅರ್ಹ ಕುಟುಂಬಗಳಿಗೂ ಶೀಘ್ರ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕು. ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ನೂರಾರು ನಿವಾಸಿಗಳೊಂದಿಗೆ ತಹಶೀಲ್ದಾರ್ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಮೂಲಕ ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಎಂ.ಬಿ. ನದಾಫ್, ಪರವೀನಬಾನು ಹವಾಲ್ದಾರ, ಮೌಲಾಸಾಬ ಗಚ್ಚಿ, ಪುಷ್ಪಾ ಬಿಜಾಪೂರ, ಆರೀಫ್ ಕಾಗದಗಾರ, ಆಯಿಶಾ ನದಾಫ್, ರೆಹಮಾನಬಿ ಕೊಲಕಾರ, ಭಾಗ್ಯಬಾಳವ್ವ ಗುಣ್ಣದ, ಶಮೀದಅಲಿ ಚೌಧರಿ, ಮಾಳಮ್ಮ ಮಾದರ, ಆಶೀಫ್ ನಾಲಬಂದ, ತೌಶೀಫ್ ಮುಲ್ಲಾ ಸೇರಿದಂತೆ ವಿವಿಧ ಸ್ಲಂ ಪ್ರದೇಶಗಳ ನೂರಾರು ನಿವಾಸಿಗಳು ಉಪಸ್ಥಿತರಿದ್ದರು.

ಹಕ್ಕುಪತ್ರ ನೀಡಿ ೧೩ ವರ್ಷಗಳಾದರೂ ನಿವೇಶನ ಹಂಚಿಕೆ ಮಾಡದಿರುವುದು ಬಡ ಕುಟುಂಬಗಳಿಗೆ ಮಾಡಿದ ಅನ್ಯಾಯವಾಗಿದೆ. ಅಧಿಕಾರಿಗಳು ತಕ್ಷಣ ಸಮಸ್ಯೆ ಬಗೆಹರಿಸಿ ಅರ್ಹರಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕು.

– ಇಮ್ತಿಯಾಜ್ ಆರ್. ಮಾನ್ವಿ, ಅಧ್ಯಕ್ಷರು, ಗದಗ ಜಿಲ್ಲಾ ಸ್ಲಂ ಸಮಿತಿ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img