ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ಹಾಜರಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.
ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆಯಾದ ಬಳಿಕ ಹೆಚ್ಚಿನ ಮಾಹಿತಿ ಹಾಗೂ ಕೆಲವು ಸ್ಪಷ್ಟನೆಗಳನ್ನು ಪಡೆಯುವ ಉದ್ದೇಶದಿಂದ ಇ.ಡಿ ಅಧಿಕಾರಿಗಳು ನಾಗೇಂದ್ರ ಅವರಿಗೆ ಸಮನ್ಸ್ ನೀಡಿದ್ದರು. ಅದರಂತೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಚಾರಣೆಗೆ ಹಾಜರಾದ ಅವರು, ವಿಚಾರಣೆ ಮುಗಿದ ಬಳಿಕ ಅಧಿಕಾರಿಗಳಿಗೆ ಅಗತ್ಯ ಸ್ಪಷ್ಟನೆಗಳನ್ನು ನೀಡಿರುವುದಾಗಿ ತಿಳಿಸಿದರು.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರ, “ಕಳೆದ ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ ಬರಲು ಸಾಧ್ಯವಾಗಿರಲಿಲ್ಲ. ಕೆಲವು ಸ್ಪಷ್ಟನೆಗಳನ್ನು ನೀಡಬೇಕಿತ್ತು. ಇದೀಗ ಬಂದು ಉತ್ತರಿಸಿದ್ದೇನೆ. ಮತ್ತೊಮ್ಮೆ ಕರೆದರೂ ಹಾಜರಾಗುತ್ತೇನೆ” ಎಂದು ಹೇಳಿದರು.
ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ನಮ್ಮದು ಏನೂ ಪಾತ್ರ ಇಲ್ಲ. ಇದು ಬ್ಯಾಂಕ್ ಫ್ರಾಡ್. ಯೂನಿಯನ್ ಬ್ಯಾಂಕ್ನವರಿಂದ ಆಗಿರುವ ಕೆಲಸ. ರಾಜಕೀಯ ಕಾರಣಕ್ಕಾಗಿ ನನ್ನ ಮೇಲೆ ಆರೋಪ ಮಾಡಲಾಗಿದೆ” ಎಂದು ಆರೋಪಿಸಿದರು. ಪ್ರಕರಣ ಕೋರ್ಟ್ನಲ್ಲಿ ನಡೆಯುತ್ತಿರುವುದಾಗಿ ತಿಳಿಸಿದರು.
ತಮ್ಮ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ನಾಗೇಂದ್ರ, ಪಕ್ಷದ ಹಿತದೃಷ್ಟಿಯಿಂದ ತಾವೇ ಸ್ವಯಂಪ್ರೇರಿತವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿದರು.
ಇದೇ ವೇಳೆ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಪಾದಯಾತ್ರೆಯಿಂದ ಕಾಂಗ್ರೆಸ್ ಮತ್ತಷ್ಟು ಒಗ್ಗಟ್ಟಾಗಿದೆ ಎಂದು ಹೇಳಿದರು. ಬಳ್ಳಾರಿಯಲ್ಲಿ ಕಾಂಗ್ರೆಸ್ ಗಟ್ಟಿಯಾಗಿದ್ದು, ಬಿಜೆಪಿಯ ಪಾದಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಟೀಕಿಸಿದರು.
ಜನಾರ್ದನ ರೆಡ್ಡಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಾಗೇಂದ್ರ, “ಅವರು ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ನನಗೆ ಸಚಿವ ಸ್ಥಾನ ನೀಡಿದ್ದನ್ನು ಅವರಿಗೆ ತಡೆಯಲಾಗಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.



