ನವದೆಹಲಿ: ಕಾಂಗ್ರೆಸ್ನ ಪ್ರಭಾವಿ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಕುಟುಂಬಕ್ಕೆ ಸೇರಿದ 21 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಶೋಧ ಕಾರ್ಯ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇಡಿ ತನ್ನ ಪ್ರಕಟಣೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಅವ್ಯವಹಾರ ಹಾಗೂ ಗುತ್ತಿಗೆದಾರರಿಂದ ಲಂಚ ಪಡೆದಿರುವ ಆರೋಪಗಳ ಕುರಿತು ಮಾಹಿತಿ ನೀಡಿದೆ ಎನ್ನಲಾಗಿದೆ.
ಈ ನಡುವೆ ಉದ್ಯಮಿ ವಿಜಯ್ ಮಲ್ಯ ಅವರು ಸತೀಶ್ ಜಾರಕಿಹೊಳಿ ಪರವಾಗಿ ಬ್ಯಾಟ್ ಬೀಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಮಲ್ಯ, ಇಡಿ ಈ ಕಾರ್ಯಾಚರಣೆಯನ್ನು ದೊಡ್ಡ ಸಾಧನೆಯಂತೆ ಬಿಂಬಿಸುತ್ತಿದೆ. ಆದರೆ ಯಾವುದೇ ದೋಷಾರೋಪ ಪಟ್ಟಿ ಅಥವಾ ವಿಚಾರಣೆ ಇಲ್ಲದೆ ಸಾರ್ವಜನಿಕವಾಗಿ ವ್ಯಕ್ತಿತ್ವ ಹನನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇಂತಹ ರೀತಿಯ ಕ್ರಮ ಬೇರೆ ಯಾವುದೇ ದೇಶದಲ್ಲಿ ನಡೆಯುವುದಿಲ್ಲ. ಈ ವಿಚಾರದಲ್ಲಿ ಸಾರ್ವಜನಿಕರು ಸ್ವತಃ ಯೋಚಿಸಬೇಕು ಎಂದು ವಿಜಯ್ ಮಲ್ಯ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ. ಮಲ್ಯ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.
ಡಿಕೆಶಿಯಿಂದ ಮತ್ತೆ ದಾಳಿ ಬಗ್ಗೆ ಎಚ್ಚರಿಕೆ
ಇನ್ನು ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಕುಟುಂಬಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ಶೋಧ ನಡೆಸಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ನಾಯಕರನ್ನು ಟ್ರ್ಯಾಪ್ ಮಾಡಲು ಇಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇನ್ನೂ ಮೂರ್ನಾಲ್ಕು ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕರ ಮೇಲೆ ಇಂತಹ ದಾಳಿಗಳು ಏಕೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಇಡಿ ದಾಳಿ ನಡೆಯುವ ಮುನ್ನವೇ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
‘ನಮ್ಮ ಸಂಸ್ಥೆಗಳ ವಹಿವಾಟು ₹2,000 ಕೋಟಿ’
ಇಡಿ ದಾಳಿ ಕುರಿತು ಈ ಹಿಂದೆ ಪ್ರತಿಕ್ರಿಯಿಸಿದ್ದ ಸತೀಶ್ ಜಾರಕಿಹೊಳಿ, ತಮ್ಮ ಹಾಗೂ ಕುಟುಂಬಸ್ಥರಿಗೆ ಸೇರಿದ ಸಂಸ್ಥೆಗಳ ವಾರ್ಷಿಕ ವಹಿವಾಟು ₹2,000 ಕೋಟಿಗೂ ಅಧಿಕವಾಗಿದೆ ಎಂದು ಹೇಳಿದ್ದರು.
ವಿದೇಶದಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸಲಾಗಿದ್ದು, ಈವರೆಗೆ ಹೂಡಿಕೆ ಮಾಡಿಲ್ಲ. ಹೂಡಿಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಇಡಿ ವಶಪಡಿಸಿಕೊಂಡಿದೆ ಎನ್ನಲಾದ ₹2 ಕೋಟಿಯನ್ನು ಕಾನೂನುಬದ್ಧವಾಗಿ ಕ್ಲೈಮ್ ಮಾಡುವುದಾಗಿ ಕೂಡ ಸತೀಶ್ ಜಾರಕಿಹೊಳಿ ಹೇಳಿದ್ದರು.
ಇದರ ಬೆನ್ನಲ್ಲೇ ಇಡಿ ತನ್ನ ಪ್ರಕಟಣೆಯಲ್ಲಿ ಗುತ್ತಿಗೆದಾರರಿಂದ ಲಂಚ ಪಡೆದಿರುವುದು ಹಾಗೂ ಲೋಕೋಪಯೋಗಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಕುರಿತು ಮಾಹಿತಿ ನೀಡಿದೆ ಎನ್ನಲಾಗಿದೆ. ಹೀಗಾಗಿ ಸತೀಶ್ ಜಾರಕಿಹೊಳಿ ಕುಟುಂಬಕ್ಕೆ ಸಂಬಂಧಿಸಿದ ಇಡಿ ಶೋಧ ಕಾರ್ಯ ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.



