HomeIndia Newsರಸ್ತೆಯಲ್ಲಿ ಭಿಕ್ಷೆ ಬೇಡಿದ ಮಹಾರಾಷ್ಟ್ರದ ಅತ್ಯಂತ ಶ್ರೀಮಂತ BJP ಶಾಸಕ ಪರಾಗ್ ಶಾ!

ರಸ್ತೆಯಲ್ಲಿ ಭಿಕ್ಷೆ ಬೇಡಿದ ಮಹಾರಾಷ್ಟ್ರದ ಅತ್ಯಂತ ಶ್ರೀಮಂತ BJP ಶಾಸಕ ಪರಾಗ್ ಶಾ!

For Dai;y Updates Join Our whatsapp Group

ಮುಂಬೈ: ಮಹಾರಾಷ್ಟ್ರದ ಘಾಟ್‌ಕೋಪರ್ ಪೂರ್ವ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ರಾಜ್ಯದ ಅತ್ಯಂತ ಶ್ರೀಮಂತ ಜನಪ್ರತಿನಿಧಿಗಳಲ್ಲಿ ಒಬ್ಬರಾಗಿರುವ ಪರಾಗ್ ಶಾ (Parag Shah) ಭಿಕ್ಷುಕನ ವೇಷ ಧರಿಸಿ ರಸ್ತೆಯಲ್ಲಿ ಓಡಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ. ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವ ಶಾಸಕರು ಘಾಟ್‌ಕೋಪರ್‌ನ ರಸ್ತೆಗಳಲ್ಲಿ ಕೆಲ ಗಂಟೆಗಳ ಕಾಲ ಭಿಕ್ಷುಕನಂತೆ ಕಾಲ ಕಳೆದಿದ್ದು, ಇದನ್ನು ನೋಡಿದ ಸಾರ್ವಜನಿಕರು ಹಾಗೂ ರಾಜಕೀಯ ವಲಯ ಆಶ್ಚರ್ಯಚಕಿತಗೊಂಡಿದೆ.

ಜೈನ ಧರ್ಮಗುರುಗಳ ಸಲಹೆಯಂತೆ ಭಿಕ್ಷುಕನ ವೇಷ: ಪ್ರಸ್ತುತ ಜೈನ ಸಮುದಾಯದ ಪವಿತ್ರ ಚಾತುರ್ಮಾಸ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಜೈನ ಧರ್ಮಗುರು ನಮ್ರಮುನಿ ಅವರ ಸಲಹೆಯಂತೆ ಪರಾಗ್ ಶಾ ಅವರು ಒಂದು ದಿನದ ಮಟ್ಟಿಗೆ ಭಿಕ್ಷುಕನ ಜೀವನವನ್ನು ಅನುಭವಿಸಲು ಮುಂದಾಗಿದ್ದರು. ಗುರುಗಳ ಸೂಚನೆ ಪಾಲಿಸಿದ ಶಾಸಕರು ತಮ್ಮ ಭದ್ರತಾ ಸಿಬ್ಬಂದಿ, ದುಬಾರಿ ಕಾರುಗಳು ಹಾಗೂ ಬೆಲೆಬಾಳುವ ವಸ್ತುಗಳನ್ನೆಲ್ಲ ಬದಿಗಿಟ್ಟು ಸಾಮಾನ್ಯ ಭಿಕ್ಷುಕನ ವೇಷದಲ್ಲೇ ರಸ್ತೆಗಿಳಿದಿದ್ದರು.

ರಸ್ತೆಬದಿಯಲ್ಲಿ ಕುಳಿತು ಭಿಕ್ಷೆಯ ಆಹಾರ ಸೇವನೆ: ಘಾಟ್‌ಕೋಪರ್‌ನ ವಿವಿಧ ರಸ್ತೆಗಳಲ್ಲಿ ಓಡಾಡಿದ ಶಾಸಕರು ಸಾರ್ವಜನಿಕರ ಬಳಿ ಭಿಕ್ಷೆ ಬೇಡಿದ್ದಾರೆ. ರಸ್ತೆ ಬದಿಯಲ್ಲಿ ಕುಳಿತು ಭಿಕ್ಷೆಯಾಗಿ ದೊರೆತ ಆಹಾರವನ್ನೇ ಸೇವಿಸಿದ್ದಾರೆ. ವಿಶೇಷವೆಂದರೆ, ಆ ಸಮಯದಲ್ಲಿ ಅವರೊಂದಿಗೆ ಇದ್ದ ಬಹುತೇಕ ಜನರಿಗೆ ಅವರು ಭಾರಿ ಶ್ರೀಮಂತ ಶಾಸಕ ಪರಾಗ್ ಶಾ ಎಂಬ ವಿಷಯವೇ ತಿಳಿದಿರಲಿಲ್ಲ. ಬಳಿಕ ತಮ್ಮ ನೈಜ ರೂಪದಲ್ಲಿ ಅದೇ ಸ್ಥಳಗಳಿಗೆ ಮತ್ತೆ ಭೇಟಿ ನೀಡಿದ ಶಾಸಕರು, ತಾವು ಭಿಕ್ಷುಕನಾಗಿದ್ದಾಗ ನಡೆದ ಸಂಭಾಷಣೆ ಹಾಗೂ ಅನುಭವಗಳನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ.

3,383 ಕೋಟಿಗೂ ಅಧಿಕ ಆಸ್ತಿಯೊಡೆಯ: 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಅಫಿಡವಿಟ್‌ನಲ್ಲಿ ಪರಾಗ್ ಶಾ ಅವರು 3,383 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಐದು ವರ್ಷಗಳ ಹಿಂದೆ ಸುಮಾರು 500 ಕೋಟಿ ರೂ. ಆಸ್ತಿ ಹೊಂದಿದ್ದ ಇವರ ಸಂಪತ್ತು ರಿಯಲ್ ಎಸ್ಟೇಟ್ ಉದ್ಯಮದ ಮೂಲಕ ಕೆಲವೇ ವರ್ಷಗಳಲ್ಲಿ ಹಲವು ಪಟ್ಟು ಹೆಚ್ಚಾಗಿತ್ತು. ಈ ಹಿಂದೆ ಮುಂಬೈ ಮಹಾನಗರ ಪಾಲಿಕೆಯ (BMC) ನಗರಸಭಾ ಸದಸ್ಯರಾಗಿದ್ದ ಇವರು, ಪ್ರಸ್ತುತ ಘಾಟ್‌ಕೋಪರ್ ಪೂರ್ವ ಕ್ಷೇತ್ರದ ಶಾಸಕರಾಗಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img