ಬೆಂಗಳೂರು: ವಿಧಾನ ಪರಿಷತ್ ಕಲಾಪದ ವೇಳೆ ‘ವಂದೇ ಮಾತರಂ’ ಗೀತೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರಿ ಜಟಾಪಟಿ ನಡೆದಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸುವ ನಿರ್ಧಾರಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕಲಾಪ ಆರಂಭವಾಗುತ್ತಿದ್ದಂತೆ ವಂದೇ ಮಾತರಂ ಗೀತೆಯನ್ನು ಪ್ರಸ್ತುತಪಡಿಸಲಾಯಿತು. ಈ ವೇಳೆ ಕಾಂಗ್ರೆಸ್ ಸದಸ್ಯರು ಎರಡು ಚರಣಗಳ ಬಳಿಕ ಗೀತೆಯನ್ನು ಸ್ಥಗಿತಗೊಳಿಸಿದರು. ಆದರೆ, ಬಿಜೆಪಿ ಸದಸ್ಯರು ಗೀತೆಯನ್ನು ಪೂರ್ಣವಾಗಿ ಹಾಡಲು ಮುಂದಾದರು. ಇದೇ ಸಂದರ್ಭದಲ್ಲಿ ಸಭಾಪತಿಗಳು ಸಂವಿಧಾನದ ಪೀಠಿಕೆಯನ್ನು ಓದಿದರು. ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಿದ ಬಳಿಕ ಬಿಜೆಪಿ ಸದಸ್ಯರು ಸಂವಿಧಾನದ ಪೀಠಿಕೆಯನ್ನು ಓದಿದರು.
ಈ ವಿಚಾರವಾಗಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಸರ್ಕಾರ ತೀರ್ಮಾನಿಸಿದೆ ಎಂದು ಸ್ಪಷ್ಟಪಡಿಸಿದರು. ಪ್ರಧಾನಿ ಮತ್ತು ರಾಷ್ಟ್ರಪತಿಗಳ ಕಾರ್ಯಕ್ರಮಗಳಲ್ಲಿ ಮಾತ್ರ ಗೀತೆಯನ್ನು ಪೂರ್ಣವಾಗಿ ಹಾಡಲಾಗುತ್ತದೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಎರಡು ಚರಣಗಳನ್ನು ಮಾತ್ರ ಹಾಡಲಾಗುತ್ತದೆ ಎಂದು ಹೇಳಿದರು.
ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ವಂದೇ ಮಾತರಂ ಗೀತೆಗೆ ಅಪಮಾನ ಮಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಸದನದಲ್ಲಿ ಈ ಹಿಂದೆ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಲಾಗಿತ್ತು. ಇದೀಗ ಎರಡು ಚರಣಗಳಿಗೆ ಮಾತ್ರ ಸೀಮಿತಗೊಳಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಈ ವೇಳೆ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಜೋರಾಯಿತು. ಮಧ್ಯಪ್ರವೇಶಿಸಿದ ಬಿ.ಕೆ. ಹರಿಪ್ರಸಾದ್, ಈ ಸದನದಲ್ಲಿ ಈ ಹಿಂದೆ ಎರಡು ಚರಣಗಳನ್ನೇ ಹಾಡಲಾಗುತ್ತಿತ್ತು. ಬಿಜೆಪಿ ಸದಸ್ಯರು ಸಭಾಪತಿಗಳು ಪೀಠಕ್ಕೆ ಬಂದಾಗ ಪೂರ್ಣ ಗೀತೆ ಹಾಡಲು ಆರಂಭಿಸಿದ್ದಾರೆ. ಎರಡು ಚರಣಗಳನ್ನು ಏಕೆ ಹಾಡಬೇಕು ಎಂಬುದರ ಕುರಿತು ಸದನದಲ್ಲಿ ಚರ್ಚೆಯಾಗಲಿ ಎಂದು ಹೇಳಿದರು.
ಹರಿಪ್ರಸಾದ್ ಅವರ ಮಾತಿಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್ ಕಚೇರಿಯಲ್ಲ, ಸದನ ಎಂದು ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಏಕೆ ಹಾಡಬಾರದು ಎಂದು ಪ್ರಶ್ನಿಸಿದರು.
ಈ ವೇಳೆ ಯತೀಂದ್ರ ಸಿದ್ದರಾಮಯ್ಯ, ಸರ್ಕಾರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಸಭಾಪತಿಗಳು ಈ ವಿಚಾರದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಬಿಜೆಪಿ ಸದಸ್ಯ ಸಿ.ಟಿ. ರವಿ ಆಕ್ಷೇಪ ವ್ಯಕ್ತಪಡಿಸಿ, ಸಭಾಪತಿಗಳಿಗೆ ಯಾವುದೇ ಅಧಿಕಾರವಿಲ್ಲವೇ ಎಂದು ಪ್ರಶ್ನಿಸಿದರು.
ಇದೇ ವಿಚಾರವಾಗಿ ಛಲವಾದಿ ನಾರಾಯಣಸ್ವಾಮಿ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭಾನಾಯಕರಿಗೆ ಸದನದ ನಿಯಮಗಳ ಬಗ್ಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ ಅವರು, ಸಭಾಪತಿಗಳ ಕೈಯಲ್ಲಿ ಏನೂ ಇಲ್ಲ ಎಂದು ಸಭಾನಾಯಕರು ಹೇಳುವುದು ಹೇಗೆ ಎಂದು ಆಕ್ಷೇಪಿಸಿದರು. ಈ ಕುರಿತು ಸಭಾಪತಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸಭಾಪತಿಗಳು ಕಡತ ಪರಿಶೀಲಿಸಿ ಮಾತನಾಡುವುದಾಗಿ ತಿಳಿಸಿದರು. ಬಳಿಕ ತಮ್ಮ ಹೇಳಿಕೆ ತಪ್ಪಾಗಿ ಅರ್ಥೈಸಲ್ಪಟ್ಟಿದ್ದರೆ ಸ್ಪಷ್ಟನೆ ನೀಡುವುದಾಗಿ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಆದರೆ, ‘ನಿಮ್ಮ ಸ್ಪಷ್ಟನೆ ಬೇಡ, ಸಭಾಪತಿಗಳು ಮಾತನಾಡಲಿ’ ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಇದೇ ವೇಳೆ ಸಿ.ಟಿ. ರವಿ ಕೂಡ ಸಭಾಪತಿ ಪೀಠದ ಕುರಿತು ಪ್ರಶ್ನೆಗಳನ್ನು ಎತ್ತಿದರು. ‘ಸಭಾಪತಿ ಪೀಠ ಸಂವಿಧಾನ ಪೀಠವೋ ಅಥವಾ ಕಾಂಗ್ರೆಸ್ ಪೀಠವೋ?’ ಎಂದು ಅವರು ಪ್ರಶ್ನಿಸಿದರು. ವಂದೇ ಮಾತರಂ ಗೀತೆಯ ವಿಚಾರ ವಿಧಾನ ಪರಿಷತ್ ಕಲಾಪದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು.



