ನವದೆಹಲಿ: ವಸಂತ್ ಕುಂಜ್ನಲ್ಲಿರುವ ಪೇಜಾವರ ಮಠದ ಶಾಖೆ ವೇದವ್ಯಾಸ ಗುರುಕುಲದಲ್ಲಿ 39ನೇ ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಭೇಟಿ ಮಾಡಿ ಆಶೀರ್ವಾದ ಪಡೆದರು.
ಸಂಜೆ 4.30ರ ಸುಮಾರಿಗೆ ವೇದವ್ಯಾಸ ಗುರುಕುಲಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಗುರುಕುಲದ ವಿದ್ಯಾರ್ಥಿಗಳು ವೇದಘೋಷದೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿದರು. ಡಾ. ವರಖೇಡಿ ಶ್ರೀನಿವಾಸ ಆಚಾರ್ಯ, ಡಾ. ವಿಠೋಬಾಚಾರ್ಯ ಹಾಗೂ ವಾಸುದೇವ ಭಟ್ ಪೆರಂಪಳ್ಳಿ ಅವರು ಅಮಿತ್ ಶಾ ಅವರನ್ನು ಸ್ವಾಗತಿಸಿದರು.
ಬಳಿಕ ಶ್ರೀ ಕೃಷ್ಣಧಾಮಕ್ಕೆ ತೆರಳಿದ ಅಮಿತ್ ಶಾ, ಶ್ರೀಕೃಷ್ಣ ದೇವರ ದರ್ಶನ ಪಡೆದು ಪಂಚದೀಪಗಳನ್ನು ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ನಂತರ ಸಂಸ್ಥಾನದ ಪಟ್ಟದ ದೇವರ ದರ್ಶನ ಪಡೆದ ಅವರು, ಶ್ರೀ ವಿಶ್ವತೀರ್ಥ ಸಂಸ್ಮರಣ ಧ್ಯಾನಮಂದಿರಕ್ಕೆ ತೆರಳಿ ಪಾದುಕಾ ದರ್ಶನ ಮಾಡಿದರು.
ಇದಾದ ಬಳಿಕ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾದ ಅಮಿತ್ ಶಾ ಅವರು ಫಲಪುಷ್ಪ ಸಮರ್ಪಿಸಿ ಗೌರವಿಸಿದರು. ಶ್ರೀಗಳೊಂದಿಗೆ ಕೆಲಹೊತ್ತು ಆಪ್ತ ಸಮಾಲೋಚನೆ ನಡೆಸಿದರು.
ಈ ವೇಳೆ ಪೇಜಾವರ ಶ್ರೀಗಳು ಅಮಿತ್ ಶಾ ಅವರಿಗೆ ಶಾಲು, ಪೇಟ ಹಾಗೂ ಹಾರ ಹಾಕಿ ಸನ್ಮಾನಿಸಿದರು. ಬಳಿಕ ಸ್ಮರಣಿಕೆ ಸಹಿತ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಸಂಸದರಾದ ಬಾನ್ಸುರಿ ಸ್ವರಾಜ್, ರಾಮ್ ವೀರ್ ಸಿಂಗ್ ಬಿಧೂರಿ, ಶಾಸಕರಾದ ಅನಿಲ್ ಶರ್ಮಾ, ಕೈಲಾಶ್ ಗೆಹ್ಲೋಟ್, ಡಿಡಿಎ ಸದಸ್ಯ ರಾಜೀವ್ ಬಬ್ಬರ್, ರಾಕೇಶ್ ಗೌರ್, ವಿದ್ವಾನ್ ಎನ್. ವಿಠಲ ಭಟ್, ಟಿ.ಪಿ. ಅನಂತ್ ಹಾಗೂ ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಭಟ್, ಅಶ್ವಿನ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



