ದೊಡ್ಡಬಳ್ಳಾಪುರ: ಗಾರೆ ಕೆಲಸ ಮಾಡಿಕೊಂಡಿದ್ದ ಮೂವರು ಇದೀಗ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಇಳಿದು ಪೊಲೀಸರ ಅತಿಥಿಯಾಗಿದ್ದಾರೆ. ಕಾಲೇಜು ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಅಂತರ್ರಾಜ್ಯ ಗಾಂಜಾ ಪೆಡ್ಲರ್ ಗ್ಯಾಂಗ್ವೊಂದನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಗ್ರಾಮಾಂತರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರನ್ನು ಸುರೇಶ್ ಸಹಾನಿ, ರೋಹಿತ್ ಕುಮಾರ್ ಮತ್ತು ರೂಪೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಬಿಹಾರ ಮತ್ತು ಜಾರ್ಖಂಡ್ ಮೂಲದವರು ಎನ್ನಲಾಗಿದೆ.
ಮೂವರು ಆರೋಪಿಗಳು ಈ ಹಿಂದೆ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಬಳಿಕ ಅಕ್ರಮವಾಗಿ ಗಾಂಜಾ ಮಾರಾಟದ ದಂಧೆಗೆ ಇಳಿದಿದ್ದರು ಎನ್ನಲಾಗಿದೆ.
ಕಾಲೇಜು ಸಮೀಪ ಗಾಂಜಾ ಸೊಪ್ಪು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 6 ಲಕ್ಷ ರೂಪಾಯಿ ಮೌಲ್ಯದ 5.6 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.
ಇದರ ಜೊತೆಗೆ ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನವೀನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



