HomeKarnataka Newsದರ್ಶನ್ʼಗೆ ಹೈಕೋರ್ಟ್ ನಲ್ಲಿ ಮತ್ತೆ ಹಿನ್ನಡೆ: ಪ್ರದೋಷ್ ಮಾಫಿ ಸಾಕ್ಷಿ ಪ್ರಶ್ನಿಸಿದ್ದ ಅರ್ಜಿ ವಜಾ

ದರ್ಶನ್ʼಗೆ ಹೈಕೋರ್ಟ್ ನಲ್ಲಿ ಮತ್ತೆ ಹಿನ್ನಡೆ: ಪ್ರದೋಷ್ ಮಾಫಿ ಸಾಕ್ಷಿ ಪ್ರಶ್ನಿಸಿದ್ದ ಅರ್ಜಿ ವಜಾ

For Dai;y Updates Join Our whatsapp Group

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಆದೇಶದ ಸಂಪೂರ್ಣ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವ ಕ್ರಮವನ್ನು ಪ್ರಶ್ನಿಸಿ ವಿಜಯಲಕ್ಷ್ಮೀ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಹಲವು ಅಂಶಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಪ್ರದೋಷ್ 2026ರ ಜುಲೈ 27ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ನಡುವೆ ಅವರು ವಿಚಾರಣಾ ಕೈದಿಯೊಬ್ಬರ ಹೆಸರಿನಲ್ಲಿದ್ದ ಮೊಬೈಲ್ ಬಳಸುತ್ತಿದ್ದರು ಎಂದು ಆರೋಪಿಸಲಾಯಿತು. ಅಲ್ಲದೆ, ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಅವರು ತಮ್ಮ ಪತ್ನಿಯೊಂದಿಗೆ ನಿರಂತರವಾಗಿ ಮಾತನಾಡಿದ್ದರು. ಆ ಬಳಿಕ ಅವರ ಮನಸ್ಥಿತಿಯಲ್ಲಿ ಬದಲಾವಣೆಯಾಗಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ ಎಂದು ದರ್ಶನ್ ಪರ ವಕೀಲರು ವಾದಿಸಿದರು.

ಪ್ರಕರಣದ 10ನೇ ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದರೂ, ಆ ಅರ್ಜಿಯನ್ನು ಪರಿಗಣಿಸದೆ ಕೇವಲ ಪ್ರದೋಷ್ ಅವರ ಅರ್ಜಿಯನ್ನು ಪರಿಗಣಿಸಲಾಗಿದೆ ಎಂದು ಆಕ್ಷೇಪಿಸಲಾಯಿತು.

ಮಾಫಿ ಸಾಕ್ಷಿಯಿಲ್ಲದೇ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರಾಸಿಕ್ಯೂಷನ್ ಪರವಾಗಿ ಸ್ಪಷ್ಟಪಡಿಸಬೇಕು. ಅಲ್ಲದೆ, ನ್ಯಾಯಾಲಯಕ್ಕೆ ಸಮಾಧಾನವಾದಲ್ಲಿ ಮಾತ್ರ ಆರೋಪಿಯನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಬೇಕು ಎಂದು ದರ್ಶನ್ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು.

ದರ್ಶನ್ ಪರ ವಕೀಲರ ವಾದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಪ್ರದೋಷ್ ಮೊಬೈಲ್ ಬಳಸಿದ್ದಾರೆ ಎಂಬ ಆರೋಪ ಸುಳ್ಳು. ಜೈಲಿನಲ್ಲಿ ಅಧಿಕೃತವಾಗಿ ನೀಡಲಾಗಿದ್ದ ದೂರವಾಣಿಯನ್ನೇ ಅವರು ಬಳಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಪ್ರದೋಷ್ ಪರ ವಕೀಲ ಕೆ. ದಿವಾಕರ್, ದರ್ಶನ್ ಪರ ವಕೀಲರು ವಿಚಾರಣೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿದ್ದಾರೆ ಎಂದು ವಾದಿಸಿದರು. ಜೈಲು ಕೈಪಿಡಿಯ ನಿಯಮಗಳಿಗೆ ಅನುಗುಣವಾಗಿಯೇ ದೂರವಾಣಿ ಬಳಕೆಯಾಗಿದ್ದು, ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದರು.

ಅಲ್ಲದೆ, ತಮ್ಮ ಕಕ್ಷಿದಾರನಿಗೆ ಯಾವುದೇ ತಪ್ಪಿಲ್ಲದಿದ್ದರೆ ಮಾಫಿ ಸಾಕ್ಷಿಯಾಗಲು ಅವಕಾಶ ನೀಡುವಂತೆ ಸ್ವತಃ ನ್ಯಾಯಮೂರ್ತಿಗಳೇ ಈ ಹಿಂದೆ ಹೇಳಿದ್ದರು ಎಂದು ಅವರು ನ್ಯಾಯಪೀಠದ ಗಮನಕ್ಕೆ ತಂದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಪೀಠ, ದರ್ಶನ್ ಪರ ವಕೀಲರಿಗೆ ಹಲವು ವಿಚಾರಗಳನ್ನು ತಿಳಿಸಿತು.

“ನಿಮ್ಮ ಕಕ್ಷಿದಾರರು ನಿಮ್ಮ ಸುರಕ್ಷಿತ ಕೈಗಳಲ್ಲಿದ್ದಾರೆ. ಪ್ರದೋಷ್ ಸಾಕ್ಷಿ ಹೇಳಲು ಬಂದಾಗ ನಿಮ್ಮ ಕಕ್ಷಿದಾರರೂ ಹಾಜರಿರಬಹುದು” ಎಂದು ನ್ಯಾಯಪೀಠ ತಿಳಿಸಿತು.

ಪ್ರದೋಷ್ ಈವರೆಗೆ ಏನು ಮಾಡಿದ್ದಾರೆ, ಅವರ ಹೇಳಿಕೆಗಳಲ್ಲಿ ಯಾವುದೇ ವ್ಯತ್ಯಾಸವಿದೆಯೇ ಎಂಬುದನ್ನು ಪಾಟಿಸವಾಲಿನ ಸಂದರ್ಭದಲ್ಲಿ ಪ್ರಶ್ನಿಸಬಹುದು. “ಆತ ಕಿವಿ ಮೇಲೆ ಹೂ ಮುಡಿಸುತ್ತಿದ್ದಾನಾ?” ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳನ್ನು ಪಾಟಿಸವಾಲಿನಲ್ಲಿ ಕೇಳಿ ಅವರ ಹೇಳಿಕೆಯ ಸ್ಥಿತಿಯನ್ನು ಬಯಲಿಗೆಳೆಯಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಜೈಲು ನಿಯಮಾವಳಿಯ ಪ್ರಕಾರ ಕೈದಿಗಳಿಗೆ ದೂರವಾಣಿ ಮೂಲಕ ಮಾತನಾಡಲು ಅವಕಾಶವಿದೆ ಎಂದು ನ್ಯಾಯಪೀಠ ತಿಳಿಸಿತು. ಸಂತೋಷ್ ಎಂಬ ಸಿಬ್ಬಂದಿಯೊಂದಿಗೆ ಮಾತನಾಡುವುದಾಗಿ ತಿಳಿಸಿ, ವಕೀಲರ ಸಂಖ್ಯೆಯನ್ನು ಬಳಸಿಕೊಂಡು ಪತ್ನಿಯೊಂದಿಗೆ ಮಾತನಾಡಿದ್ದಾರೆ ಎಂಬ ವಿಚಾರ ಮಾತ್ರ ಇದೆ. ಇದರಲ್ಲಿ ಯಾವುದೇ ರಹಸ್ಯ ಸಂಭಾಷಣೆಯ ವರದಿ ಇಲ್ಲ ಎಂದು ನ್ಯಾಯಪೀಠ ಗಮನಿಸಿತು.

“ಗಂಡ-ಹೆಂಡತಿ ಅಭಿಪ್ರಾಯ ಕೇಳಿದರೆ ತಪ್ಪೇನಿದೆ?” ಎಂದು ಪೀಠ ಪ್ರಶ್ನಿಸಿತು. ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮೀ ಅರ್ಜಿ ಸಲ್ಲಿಸಿರುವ ವಿಚಾರಕ್ಕೂ ನ್ಯಾಯಪೀಠ ಪ್ರತಿಕ್ರಿಯಿಸಿತು.

“ನ್ಯಾಯದ ಘಂಟೆಯನ್ನು ಯಾರಾದರೂ ಬಾರಿಸಲಿ ಬಿಡಿ” ಎಂದು ಹೇಳಿದ ನ್ಯಾಯಪೀಠ, ಪತಿ ವಾಪಸ್ ಬರಲಿ ಎಂದು ಪತ್ನಿ ಒದ್ದಾಡುತ್ತಿದ್ದಾರೆ. ದೇವಸ್ಥಾನಗಳಿಗೆ ತೆರಳಿ ಬೇಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಹಕ್ಕಿನ ಬಗ್ಗೆ ಪ್ರಶ್ನಿಸುವ ಅಗತ್ಯವಿಲ್ಲ ಎಂದು ತಿಳಿಸಿತು.

ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ, ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವಿಜಯಲಕ್ಷ್ಮೀ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪ್ರಕರಣದ ಕುರಿತು ಹೈಕೋರ್ಟ್‌ನ ಸಂಪೂರ್ಣ ಆದೇಶದ ಪ್ರತಿ ಬಿಡುಗಡೆಯಾದ ಬಳಿಕ ಹೆಚ್ಚಿನ ವಿವರಗಳು ಲಭ್ಯವಾಗುವ ನಿರೀಕ್ಷೆಯಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img