ಬೆಂಗಳೂರು: ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದ, ಮನೆಗಳ್ಳತನ ಮಾಡಿ ಮತ್ತೆ ವಿಮಾನದಲ್ಲೇ ವಾಪಸ್ ತೆರಳುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮನೆಗಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಕುಖ್ಯಾತ ಮನೆಗಳ್ಳನನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹೈದರಾಬಾದ್ ಮೂಲದ ನೇನಾವತ್ ವಿನೋದ್ ಕುಮಾರ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ 10ನೇ ಕ್ರಾಸ್ನಲ್ಲಿ ಆರೋಪಿ ತನ್ನ ಕೈಚಳಕ ತೋರಿದ್ದ ಎನ್ನಲಾಗಿದೆ.
ವೃದ್ಧ ದಂಪತಿ ಮನೆಯಲ್ಲಿದ್ದಾಗಲೇ ಮನೆಗೆ ಎಂಟ್ರಿ ಕೊಟ್ಟಿದ್ದ ಆರೋಪಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿಲ್ಸನ್ ಗಾರ್ಡನ್ ಪೊಲೀಸರು ತನಿಖೆ ಕೈಗೊಂಡಿದ್ದರು.
ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದು, ಆತನಿಂದ ಬರೋಬ್ಬರಿ 40 ಲಕ್ಷ ರೂಪಾಯಿ ಮೌಲ್ಯದ 271 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು, ಬಂಧಿತ ಆರೋಪಿಯ ವಿರುದ್ಧ ಹೈದರಾಬಾದ್ನ ವಿವಿಧ ಪೊಲೀಸ್ ಠಾಣೆಗಳಲ್ಲೂ ಮನೆಗಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಿಮಾನದಲ್ಲಿ ಬಂದು ನಗರದಲ್ಲಿ ಮನೆಗಳ್ಳತನ ನಡೆಸಿ, ಮತ್ತೆ ವಿಮಾನದಲ್ಲೇ ಪರಾರಿಯಾಗುತ್ತಿದ್ದ ಆರೋಪಿಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



