ನವದೆಹಲಿ: ಲಂಡನ್ನಿಂದ ನವದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಟೇಕ್ಆಫ್ ಆದ ಕೆಲವೇ ಹೊತ್ತಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನವನ್ನು ಲಂಡನ್ಗೆ ವಾಪಸ್ ಕರೆತರಲಾಗಿದೆ.
ಈ ಕುರಿತು ಇಂಡಿಗೋ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದ್ದು, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನವನ್ನು ಹಿಂದಿರುಗಿಸಲಾಗಿದೆ ಎಂದು ತಿಳಿಸಿದೆ.
ಇಂಡಿಗೋ ವಕ್ತಾರರ ಪ್ರಕಾರ, ಸೆಪ್ಟೆಂಬರ್ 22ರಂದು ಲಂಡನ್ನಿಂದ ನವದೆಹಲಿಗೆ ತೆರಳುತ್ತಿದ್ದ 6E04 ವಿಮಾನದಲ್ಲಿ ಹಾರಾಟದ ಆರಂಭಿಕ ಹಂತದಲ್ಲೇ ತಾಂತ್ರಿಕ ಸಮಸ್ಯೆ ಪತ್ತೆಯಾಗಿದೆ. ಕೂಡಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ವಿಮಾನವನ್ನು ಲಂಡನ್ಗೆ ಹಿಂದಿರುಗಿಸಲಾಯಿತು. ಬಳಿಕ ವಿಮಾನ ಯಾವುದೇ ಸಮಸ್ಯೆಯಿಲ್ಲದೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಸದ್ಯ ವಿಮಾನವನ್ನು ಸಂಪೂರ್ಣ ತಾಂತ್ರಿಕ ತಪಾಸಣೆಗೆ ಒಳಪಡಿಸಲಾಗಿದೆ. ವಿಮಾನದ ಕಾರ್ಯಾಚರಣೆಯನ್ನು ಪುನರಾರಂಭಿಸುವ ಮೊದಲು ಅಗತ್ಯವಿರುವ ಎಲ್ಲಾ ಸುರಕ್ಷತಾ ಪರಿಶೀಲನೆಗಳನ್ನು ಪೂರ್ಣಗೊಳಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಅನುಮತಿಗಳನ್ನು ಪಡೆದ ಬಳಿಕವೇ ವಿಮಾನ ಮತ್ತೆ ಹಾರಾಟ ಆರಂಭಿಸಲಿದೆ ಎಂದು ಇಂಡಿಗೋ ಸ್ಪಷ್ಟಪಡಿಸಿದೆ.
ಘಟನೆಯಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಇಂಡಿಗೋ ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕರಿಗೆ ಅಗತ್ಯವಿರುವ ಸೌಲಭ್ಯಗಳು ಮತ್ತು ನೆರವನ್ನು ಒದಗಿಸುವುದಾಗಿ ಸಂಸ್ಥೆ ತಿಳಿಸಿದೆ. ವಿಮಾನದ ತಾಂತ್ರಿಕ ಸಮಸ್ಯೆಯನ್ನು ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.



