ಕಲಬುರಗಿ: ಮಾಜಿ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಜಮೀನು ಕಬಳಿಕೆ ಆರೋಪದಡಿ ಶಿವಶಂಕರಪ್ಪ ಸಾಹುಕಾರ್ ಹಾಗೂ ಅವರ ಅಳಿಯ ಶಂಕರಗೌಡ ವಿರುದ್ಧ ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಶಹಾಪುರ ತಾಲೂಕಿನ ಅಣಬಿ ಗ್ರಾಮದಲ್ಲಿರುವ 10 ಎಕರೆ 20 ಗುಂಟೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲಾಗಿದೆ ಎಂದು ಆರೋಪಿಸಿ ವಿಶ್ವನಾಥ್ ಪಾಟೀಲ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರುದಾರರ ಆರೋಪದ ಪ್ರಕಾರ, ಅವರ ಮಲತಾಯಿ ಬಸಮ್ಮಗೌಡತಿ ಅವರಿಗೆ ಮಕ್ಕಳಿರಲಿಲ್ಲ. ಆದರೆ ಶಿವಶಂಕರಪ್ಪ ಸಾಹುಕಾರ್ ಅವರ ಅಳಿಯ ಶಂಕರಗೌಡನನ್ನು ಬಸಮ್ಮಗೌಡತಿಯ ಮಗ ಎಂದು ತೋರಿಸುವ ರೀತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ.
ಈ ದಾಖಲೆಗಳ ಆಧಾರದ ಮೇಲೆ ಬಸಮ್ಮಗೌಡತಿಗೆ ಸೇರಿದ ಜಮೀನನ್ನು ಶಂಕರಗೌಡನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಬಳಿಕ ಶಂಕರಗೌಡನಿಂದ ಜಮೀನನ್ನು ಶಿವಶಂಕರಪ್ಪ ಸಾಹುಕಾರ್ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ವಿಶ್ವನಾಥ್ ಪಾಟೀಲ್ ದೂರಿನಲ್ಲಿ ಆರೋಪಿಸಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿದವರು ಯಾರು? ಜಮೀನು ಯಾವ ದಾಖಲೆಗಳ ಆಧಾರದ ಮೇಲೆ ವರ್ಗಾವಣೆಯಾಯಿತು? ನಂತರ ಅದು ಶಿವಶಂಕರಪ್ಪ ಸಾಹುಕಾರ್ ಅವರ ಹೆಸರಿಗೆ ಹೇಗೆ ಬಂತು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸದ್ಯ ದೂರುದಾರರು ಮಾಡಿರುವ ಆರೋಪಗಳ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.



