ಕಾಂಗೋ: ಕಾಂಗೋ ನದಿಯಲ್ಲಿ ಎರಡು ದೋಣಿಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಕನಿಷ್ಠ 30 ಮಂದಿ ಜಲಸಮಾಧಿಯಾಗಿದ್ದು, ಹಲವರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಭಾನುವಾರ ಎಕ್ವೇಟರ್ ಪ್ರಾಂತ್ಯದ ನ್ಗೊಂಬೆ-ಲುಕೋಲೆಲಾ ಪ್ರದೇಶದ ಬಳಿ ಈ ದುರಂತ ಸಂಭವಿಸಿದೆ. ಅಪಘಾತಕ್ಕೀಡಾದ ಒಂದು ದೋಣಿ ದೇಶದ ವಾಯುವ್ಯ ಭಾಗದ ಉಬಾಂಗಿಯಿಂದ ರಾಜಧಾನಿ ಕಿನ್ಶಾಸಾಗೆ ತೆರಳುತ್ತಿತ್ತು. ಮತ್ತೊಂದು ದೋಣಿ ಕಿನ್ಶಾಸಾದಿಂದ ಲುಕೋಲೆಲಾ ಕಡೆಗೆ ಪ್ರಯಾಣಿಸುತ್ತಿತ್ತು.
ಎರಡು ದೋಣಿಗಳು ಮುಖಾಮುಖಿ ಡಿಕ್ಕಿಯಾದ ಬಳಿಕ ಒಂದು ದೋಣಿ ನೀರಿನಲ್ಲಿ ಮುಳುಗಿದೆ. ಅದರಲ್ಲಿದ್ದ ಹಲವು ಪ್ರಯಾಣಿಕರು ನೀರಿನೊಳಗೆ ಸಿಲುಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಉಬಾಂಗಿಯಿಂದ ಬರುತ್ತಿದ್ದ ದೋಣಿಯಲ್ಲಿ ಮಿತಿಮೀರಿದ ಸರಕುಗಳನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸಂತ್ರಸ್ತರು ಹಾಗೂ ನಾಪತ್ತೆಯಾದವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಇತ್ತೀಚಿನ ವರ್ಷಗಳಲ್ಲಿ ದೋಣಿ ಅಪಘಾತಗಳು ಹೆಚ್ಚಾಗಿವೆ. ಕೆಲ ದಿನಗಳ ಹಿಂದಷ್ಟೇ ಪೂರ್ವ ಕಾಂಗೋದ ಕಿವು ಸರೋವರದಲ್ಲಿ ದೋಣಿ ಮುಳುಗಿ 12 ಮಂದಿ ಮೃತಪಟ್ಟಿದ್ದರು.



