ಗದಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಸ್ವಾಗತಿಸಲು ಹಾಗೂ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರಿಗೆ ಜನ್ಮದಿನದ ಶುಭಾಶಯ ಕೋರಲು ಅಭಿಮಾನಿಗಳು ಅರ್ಪಿಸಿದ ಗೋವಿನಜೋಳದ ಬೃಹತ್ ಹಾರ ಬುಧವಾರ ಗದಗ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಎಲ್ಲರ ಗಮನ ಸೆಳೆಯಿತು.
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷದ ಸಾರ್ವಜನಿಕ ಸೇವೆಯ ಅಂಗವಾಗಿ ಆಯೋಜಿಸಿದ್ದ ‘ಸೇವಾಜ್ಯೋತಿ ಯಾತ್ರೆ’ ಹಾಗೂ ‘ವಿಕಸಿತ ಭಾರತದ ಸಂಕಲ್ಪ ಯಾತ್ರೆ’ ಹಿನ್ನೆಲೆಯಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಈ ವೇಳೆ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ಅನಿಲ ಮೆಣಸಿನಕಾಯಿ ಅವರ ಅಭಿಮಾನಿಗಳು 220ಕ್ಕೂ ಹೆಚ್ಚು ಗೋವಿನಜೋಳದ ತೆನೆಗಳನ್ನು ಬಳಸಿ, ಒಂದು ಕ್ವಿಂಟಲ್‌ಗೂ ಅಧಿಕ ತೂಕದ ಬೃಹತ್ ಹಾರ ಸಿದ್ಧಪಡಿಸಿದ್ದರು. ಕ್ರೇನ್ ಸಹಾಯದಿಂದ ಹಾರವನ್ನು ಅನಿಲ ಮೆಣಸಿನಕಾಯಿ ಅವರಿಗೆ ಹಾಕಿ ಗೌರವಿಸಲಾಯಿತು. ಇದೇ ವೇಳೆ ಕಂಬಳಿ ಹೊದಿಸಿ, ಕುರಿಯನ್ನು ಕಾಣಿಕೆಯಾಗಿ ನೀಡಿ ಸನ್ಮಾನಿಸಲಾಯಿತು.
ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ತಮ್ಮ ನೆಚ್ಚಿನ ನಾಯಕನಿಗೆ ವಿನೂತನವಾಗಿ ಅರ್ಪಿಸುವ ಮೂಲಕ ಗೌರವ ಸಲ್ಲಿಸುವ ಉದ್ದೇಶದಿಂದ ಅಭಿಮಾನಿ ಬಳಗದ ವಸಂತ ಪಡಗದ, ಸಿದ್ದು ಪಲ್ಲೇದ, ರಾಘವೇಂದ್ರ ಯಳವತ್ತಿ, ಮುತ್ತಣ್ಣ ಗದಗಿನ, ಇರ್ಷಾದ್ ಮಾನ್ವಿ, ಪ್ರವೀಣ ಕರಬಿಷ್ಟಿ, ಮೋಹನ ವರವಿ, ಪರಮೇಶ ನಾಯಕ, ಶರಣಪ್ಪ ಚಿಂಚಲಿ, ಬಸವರಾಜ ಕುರಿ, ಬಾಬು ಯಲಿಗಾರ್, ಬಸವರಾಜ ಕೋರಿ, ಚಂದ್ರು ಗುಡ್ಡಿಮಠ, ಸತ್ಯನಾರಾಯಣ ಘೋಡಕೆ, ರಾಮು ವಾಲ್ಮೀಕಿ, ಪ್ರವೀಣ ಅಂದೇಲಿ, ಬಸು ಪೊಲೀಸಪಾಟೀಲ, ಸಂಗು ಚಿತ್ತರಗಿ ಸೇರಿದಂತೆ ಹಲವರು ಬೃಹತ್ ಹಾರ ಅರ್ಪಿಸಿದರು.
ಈ ಸಂದರ್ಭದಲ್ಲಿ ನರಗುಂದ ಶಾಸಕ ಸಿ.ಸಿ. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

