ಗದಗ: ತಾಲೂಕಿನ ಮಹಾಲಿಂಗಪುರ ತಾಂಡಾದ ಕೃಷಿಕ ಕೃಷ್ಣಪ್ಪ ಗುರುಪ್ಪ ಲಮಾಣಿ ಅವರ ಮೆಕ್ಕೆಜೋಳದ ಬಣವೆಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು.
ಬೆಂಕಿ ಅವಘಡದಿಂದ ರೈತ ಕೃಷ್ಣಪ್ಪ ಲಮಾಣಿ ಅವರಿಗೆ ಅಪಾರ ನಷ್ಟವಾಗಿದ್ದು, ಕೈಗೆ ಬಂದ ಫಸಲು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರೈತನ ನೋವಿಗೆ ಸ್ಪಂದಿಸಿದ ಅನಿಲ ಮೆಣಸಿನಕಾಯಿ, ಸ್ಥಳಕ್ಕೆ ಭೇಟಿ ನೀಡಿ ಹಾನಿಯ ವಿವರ ಪಡೆದುಕೊಂಡರು. ಅಲ್ಲದೆ, ಸಂತ್ರಸ್ತ ರೈತನಿಗೆ ವೈಯಕ್ತಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು.
ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದ ಅವರು, ಬೆಂಕಿ ಅವಘಡದಿಂದ ಉಂಟಾಗಿರುವ ಬೆಳೆ ಹಾನಿಯನ್ನು ಸಮರ್ಪಕವಾಗಿ ಪರಿಶೀಲಿಸಿ, ನಷ್ಟದ ವರದಿ ಸಿದ್ಧಪಡಿಸಬೇಕು. ಸಂತ್ರಸ್ತ ರೈತನಿಗೆ ನಿಯಮಾನುಸಾರ ಸೂಕ್ತ ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.










