ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಯುತ್ತಿರುವ ಬೆನ್ನಲ್ಲೇ ಮಂಗಳೂರಿನ ವಿಶೇಷ ತನಿಖಾ ತಂಡದ (SIT) ಕಚೇರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದೆ. ಸೌಜನ್ಯ ಹಾಗೂ ಅವರ ತಾಯಿ ಕುಸುಮಾವತಿ ನಡುವಿನ ಸಂಬಂಧದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಧರ್ಮಸ್ಥಳದ ಗ್ರಾಮಸ್ಥ ಕಿಶೋರ್ ಎಂಬವರು,
ಕೆಲವು ದಾಖಲೆಗಳಲ್ಲಿನ ವ್ಯತ್ಯಾಸಗಳ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಆದರೆ ಸೌಜನ್ಯ ಅವರು ಕುಸುಮಾವತಿ ಅವರ ಮಗಳು ಎಂಬ ವಿಚಾರದಲ್ಲಿ ಎಸ್ಐಟಿಗೆ ಯಾವುದೇ ಸಂದೇಹವಿಲ್ಲ ಎಂದು ತನಿಖಾ ತಂಡದ ಸದಸ್ಯ ಹಾಗೂ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳದ ಪಾಂಗಳ ಗ್ರಾಮದಲ್ಲಿ 2015ರಲ್ಲಿ ಅಕ್ರಮ–ಸಕ್ರಮ ಯೋಜನೆಯಡಿ ಇಂದಿರಾವತಿ ಕೋಂ ಚಂದಪ್ಪ ಗೌಡ ಎಂಬುವವರಿಗೆ ಜಮೀನು ಮಂಜೂರಾಗಿತ್ತು. ಆದರೆ ಪ್ರಸ್ತುತ ಆ ಜಮೀನು ಕುಸುಮಾವತಿ ಅವರ ಸ್ವಾಧೀನದಲ್ಲಿರುವುದಾಗಿ ದಾಖಲೆಗಳಿವೆ ಎಂದು ಕಿಶೋರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇಂದಿರಾವತಿ ಎಂಬ ಮಹಿಳೆ ಪಾಂಗಳ ಗ್ರಾಮದಲ್ಲಿ ವಾಸಿಸುತ್ತಿಲ್ಲ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚನೆಯಾಗುವುದಕ್ಕೂ ಮೊದಲೇ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೆ ದೂರು ನೀಡಿರುವುದಾಗಿ ಕಿಶೋರ್ ತಿಳಿಸಿದ್ದಾರೆ. ಇಂದಿರಾವತಿ ಅವರ ಗುರುತು ಮತ್ತು ಜಮೀನಿನ ದಾಖಲೆಗಳ ಕುರಿತು ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇಂದಿರಾವತಿ ಮತ್ತು ಕುಸುಮಾವತಿ ಇಬ್ಬರೂ ಒಬ್ಬರೇ ಎಂದು ಸಲ್ಲಿಸಲಾಗಿರುವ ಪ್ರಮಾಣಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂಬುದು ಅವರ ಆಗ್ರಹವಾಗಿದೆ.
ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ ಸೇರಿದಂತೆ ಕೆಲವು ದಾಖಲೆಗಳಲ್ಲಿ ವ್ಯತ್ಯಾಸಗಳಿವೆ ಎಂದು ಆರೋಪಿಸಿರುವ ಕಿಶೋರ್, ಸೌಜನ್ಯ ಮತ್ತು ಅವರ ಸಹೋದರಿ ಸೌಮ್ಯ ಅವರ ಕುಟುಂಬ ಸಂಬಂಧಗಳ ಕುರಿತು ಅಧಿಕೃತ ದಾಖಲೆಗಳ ಆಧಾರದಲ್ಲಿ ಸ್ಪಷ್ಟನೆ ಪಡೆಯಬೇಕೆಂದು ಮನವಿ ಮಾಡಿದ್ದಾರೆ. ಜನನ ನೋಂದಣಿ, ಆಸ್ಪತ್ರೆ ಹಾಗೂ ಶಾಲಾ ದಾಖಲೆಗಳನ್ನು ಪರಿಶೀಲಿಸುವಂತೆ ಅವರು ಒತ್ತಾಯಿಸಿದ್ದಾರೆ. ಅಗತ್ಯವಿದ್ದರೆ ಕಾನೂನುಬದ್ಧವಾಗಿ ವೈಜ್ಞಾನಿಕ ಪರೀಕ್ಷೆ ನಡೆಸುವಂತೆಯೂ ಮನವಿ ಮಾಡಿದ್ದಾರೆ.
ಇದಲ್ಲದೆ, ಜಮೀನಿಗೆ ಸಂಬಂಧಿಸಿದ ವಿವಾದಕ್ಕೂ ಸೌಜನ್ಯ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧವಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಕಿಶೋರ್ ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಸೌಜನ್ಯ ಅವರ ಮಾವ ವಿಟ್ಠಲ ಗೌಡ ಅವರನ್ನೂ ವಿಚಾರಣೆಗೆ ಒಳಪಡಿಸುವಂತೆ ಮನವಿ ಮಾಡಿದ್ದಾರೆ. ಆದರೆ ದೂರಿನಲ್ಲಿ ವ್ಯಕ್ತಪಡಿಸಿರುವ ಅನುಮಾನಗಳು ಸ್ವತಂತ್ರವಾಗಿ ದೃಢಪಟ್ಟಿಲ್ಲ.
ಇನ್ನು, ಈ ದೂರಿನ ಕುರಿತು ಮಂಗಳೂರು ಪೊಲೀಸ್ ಆಯುಕ್ತ ಹಾಗೂ ಎಸ್ಐಟಿ ಸದಸ್ಯ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಸೌಜನ್ಯ ಅವರು ಕುಸುಮಾವತಿ ಅವರ ಮಗಳು ಎಂಬ ವಿಚಾರದಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ. ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಯ ವ್ಯಾಪ್ತಿಯನ್ನು ಮೀರಿ ತನಿಖೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕರಣಕ್ಕೆ ನೇರವಾಗಿ ಸಂಬಂಧವಿಲ್ಲದ ವೈಯಕ್ತಿಕ ಅಥವಾ ಸ್ಥಳೀಯ ವಿವಾದಗಳನ್ನು ಎಸ್ಐಟಿ ತನಿಖೆಯ ಭಾಗವಾಗಿಸುವುದಿಲ್ಲ. ಸ್ಥಳೀಯ ಮಟ್ಟದಲ್ಲಿ ಜಮೀನು ಅಥವಾ ದಾಖಲೆಗಳಿಗೆ ಸಂಬಂಧಿಸಿದ ವಿವಾದಗಳಿದ್ದರೆ, ಅವುಗಳನ್ನು ಸಂಬಂಧಪಟ್ಟ ಸ್ಥಳೀಯ ಪೊಲೀಸರು ಪರಿಶೀಲಿಸಲಿದ್ದಾರೆ ಎಂದು ಸುಧೀರ್ ಕುಮಾರ್ ರೆಡ್ಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.








