ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕ್ಲೀನ್ಚಿಟ್ ನೀಡುವ ಉದ್ದೇಶದಿಂದ ತಮ್ಮ ಹೆಸರನ್ನು ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ ಎಂದು ಆರೋಪಿಸಿರುವ ಅವರು, “ಪ್ರಿಯಾಂಕ್ ಖರ್ಗೆ ಬಳಿ ಕೇವಲ ಟ್ರೇಲರ್ ಇರಬಹುದು, ಆದರೆ ಅಸಲಿ ಪಿಕ್ಚರ್ ನಮ್ಮ ಬಳಿ ಇದೆ” ಎಂದು ಗುಡುಗಿದ್ದಾರೆ.
ಬೆಂಗಳೂರಿನ ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಮಾಜಿ ಸಚಿವರಾದ ಸಾ.ರಾ. ಮಹೇಶ್, ವೆಂಕಟ್ ರಾವ್ ನಾಡಗೌಡ ಹಾಗೂ ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಮಂಜೇಗೌಡ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ದಾಖಲೆಗಳು ಮತ್ತು ಹಳೆಯ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿದರು.
ಎಫ್ಎಸ್ಎಲ್ ವರದಿಗೂ ಮುನ್ನವೇ ತೀರ್ಮಾನವೇ?
ಅಕ್ಟೋಬರ್ 29ರಂದು ಪೊಲೀಸ್ ಕಮಿಷನರ್ ಕಚೇರಿ ಹೊರಡಿಸಿದ ಪ್ರಕಟಣೆಯಲ್ಲಿ ಲೈಂಗಿಕ ದೌರ್ಜನ್ಯದ ವಿಚಾರ ಕಟ್ಟುಕಥೆ, ಅಂತಹ ಘಟನೆ ನಡೆದಿಲ್ಲ ಎಂದು ಹೇಳಲಾಗಿದೆ. ಆದರೆ ಎಫ್ಎಸ್ಎಲ್ ವರದಿ ಬರುವ ಮುನ್ನವೇ ಪೊಲೀಸರು ಘಟನೆ ನಡೆದಿಲ್ಲ ಎಂದು ತೀರ್ಮಾನಿಸಿರುವುದು ಹೇಗೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ರಕ್ಷಿಸಿ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
2011ರಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿರುವುದನ್ನು 2023ರಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗುತ್ತಿದೆ. ಹಾಗಿದ್ದರೆ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವಾ ಅವರ ಪಾತ್ರವೇನು? ಕೇರಳ ಮೂಲದ ಮಹಿಳೆ ಈ ಹಿಂದೆ ನೀಡಿದ್ದ ಇ-ಮೇಲ್ ದೂರುಗಳ ಬಗ್ಗೆ ತನಿಖೆ ನಡೆದಿದೆಯೇ? ವಿಡಿಯೋದಲ್ಲಿರುವ ಮೂರನೇ ವ್ಯಕ್ತಿ ಯಾರು? ಕೃಪಾ ಆಳ್ವಾ ಅವರನ್ನು ವಿದೇಶಕ್ಕೆ ಕಳುಹಿಸಿದ್ದು ಏಕೆ? 2023ರಲ್ಲಿ ಈ ವಿಡಿಯೋ ಹೊರಬರಲು ಕಾರಣವೇನು? ಎಂಬ ಹಲವು ಪ್ರಶ್ನೆಗಳನ್ನು ಕುಮಾರಸ್ವಾಮಿ ಮುಂದಿಟ್ಟಿದ್ದಾರೆ.
ನನ್ನ ನಿವಾಸದಲ್ಲಿ ಬಂಧನವಾಗಿಲ್ಲ: ಎಚ್ಡಿಕೆ ಸ್ಪಷ್ಟನೆ
ಆರೋಪಿ ರಿತೀಶ್ ಕುಮಾರ್ ತಮ್ಮ ಮನೆಯಲ್ಲಿದ್ದ, ಅಲ್ಲಿಯೇ ಮೊಬೈಲ್ಗಳನ್ನು ಬದಲಾಯಿಸಿಕೊಳ್ಳಲಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಆಕ್ಷೇಪಿಸಿದ್ದಾರೆ. ಆದರೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲೇ ಆರೋಪಿಯ ವಿಳಾಸ ಉತ್ತರ ಪ್ರದೇಶದ ಗಾಜಿಯಾಬಾದ್ ಎಂದು ಉಲ್ಲೇಖಿಸಲಾಗಿದೆ. ಅಕ್ಟೋಬರ್ 23ರಂದು ಮಧ್ಯಾಹ್ನ 2.59ಕ್ಕೆ ಗಾಜಿಯಾಬಾದ್ನ ಇಂದಿರಾಪುರಂನಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆರೋಪಿ ತಮ್ಮ ದೆಹಲಿ ನಿವಾಸದಲ್ಲಿ ಇರಲೇ ಇಲ್ಲ ಎಂದಿರುವ ಕುಮಾರಸ್ವಾಮಿ, ತಮ್ಮ ನಿವಾಸದಲ್ಲಿ ಮಹಜರು ನಡೆಸಲಾಗಿದೆ ಎಂಬ ಸುದ್ದಿಗಳು ಸುಳ್ಳು ಎಂದು ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಗೃಹ ಸಚಿವರು ಮತ್ತು ಪೊಲೀಸ್ ಕಮಿಷನರ್ ಕಟ್ಟುಕಥೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಡಿಕೆಶಿ ಹಳೆಯ ವಿಡಿಯೋ ಪ್ರದರ್ಶಿಸಿ ಪ್ರಶ್ನೆ
ವಿಧಾನಸಭೆಯಲ್ಲಿ ಈ ಹಿಂದೆ ಸಿಡಿ ಮತ್ತು ಬ್ಲ್ಯಾಕ್ಮೇಲ್ ಸಂಸ್ಕೃತಿಯ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿದ್ದ ವಿಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಕುಮಾರಸ್ವಾಮಿ, ಈಗ ತಮ್ಮದೇ ಸರ್ಕಾರದ ಅವಧಿಯಲ್ಲಿ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿಯೂ ತಮ್ಮ ಹೆಸರನ್ನು ಅನಗತ್ಯವಾಗಿ ತಳಕು ಹಾಕಲಾಗುತ್ತಿದೆ ಎಂದು ಆರೋಪಿಸಿದ ಅವರು, ಪ್ರಜ್ವಲ್ ಅವರ ಕಾರು ಚಾಲಕ ಕಾರ್ತಿಕ್ ಆಗಸ್ಟ್ 5 ಮತ್ತು 6ರಂದು ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಕ್ಕೆ ಸಂಬಂಧಿಸಿದ ಕಾಲ್ ಡೇಟಾ ದಾಖಲೆಗಳಿವೆ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ
ಕೇಂದ್ರ ಸಚಿವರು ಇಡಿ ಮತ್ತು ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಪ್ರಿಯಾಂಕ್ ಖರ್ಗೆ ಅವರ ಆರೋಪಕ್ಕೂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ತಮ್ಮ 14 ವರ್ಷಗಳ ರಾಜಕೀಯ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ರಕ್ಷಣೆ ಕೇಳಿಲ್ಲ. ಯಾರ ವಿರುದ್ಧವೂ ತನಿಖಾ ಸಂಸ್ಥೆಗಳನ್ನು ಬಳಸುವಂತೆ ಮನವಿ ಮಾಡಿಲ್ಲ ಎಂದು ಹೇಳಿದ್ದಾರೆ.
ತಮ್ಮ ಮನೆ ಬಾಗಿಲು ಬಡವರ ಸಮಸ್ಯೆಗಳಿಗೆ ಸದಾ ತೆರೆದಿರುತ್ತದೆ. ಆದರೆ ಅಲ್ಲಿಗೆ ಯಾರು ಬರುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಪ್ರಿಯಾಂಕ್ ಖರ್ಗೆ ಬೇಹುಗಾರರನ್ನು ಕಳುಹಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಜ್ಯೋತ್ಸವದ ದಿನ ರಹಸ್ಯ ಸಭೆ ನಡೆದಿತ್ತೇ?
71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಸುದ್ದಿ ಪ್ರಮುಖವಾಗಬೇಕಿತ್ತು. ಆದರೆ ಸರ್ಕಾರದ ಹಗರಣಗಳು ಮತ್ತು ತನಿಖೆಯ ವಿಚಾರಗಳಿಂದಾಗಿ ರಾಜ್ಯೋತ್ಸವದ ಸುದ್ದಿಯೇ ಮರೆಯಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಜಿ ಮತ್ತು ಪೊಲೀಸ್ ಕಮಿಷನರ್ ಜೊತೆ ಯಾವ ಕೊಠಡಿಯಲ್ಲಿ ರಹಸ್ಯ ಸಭೆ ನಡೆಸಿದರು ಎಂದು ಪ್ರಶ್ನಿಸಿದ್ದಾರೆ.
ಪ್ರಾಮಾಣಿಕ ತನಿಖೆಗೆ ಸಿದ್ಧ ಎಂದ ಕುಮಾರಸ್ವಾಮಿ
ಪ್ರಕರಣದ ತನಿಖಾಧಿಕಾರಿ ಸತೀಶ್ ಅವರನ್ನು ದಿಢೀರ್ ಬದಲಾಯಿಸಿದ್ದು ಏಕೆ? ವಶಪಡಿಸಿಕೊಂಡ ಮೊಬೈಲ್ಗಳನ್ನು ಇಟ್ಟುಕೊಂಡು ಏನು ಮಾಡಲಾಗುತ್ತಿದೆ? ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಪ್ರಾಮಾಣಿಕ ಅಧಿಕಾರಿಗಳನ್ನು ಬಳಸಿಕೊಂಡು ರಾಜಕೀಯ ಸೇಡು ತೀರಿಸಿಕೊಳ್ಳುವ ಕೆಲಸ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
ಯಾವುದೇ ತನಿಖೆಗೂ ತಾವು ಸಿದ್ಧವಿದ್ದು, ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ. “ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.









