ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಪಕ್ಷದ ಒಳಗಡೆಯೇ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ, ಪೊಲೀಸ್ ಇಲಾಖೆಯ ಕಾರ್ಯವೈಖರಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು. ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಸರ್ಕಾರಕ್ಕೆ 2028ರ ವಿಧಾನಸಭೆ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಸ್ಟಿಂಗ್ ಪ್ರಕರಣದ ತನಿಖೆ ದಾರಿ ತಪ್ಪಿದೆ: ಹೆಚ್ಡಿಕೆ
ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಸಂಪೂರ್ಣವಾಗಿ ದಾರಿ ತಪ್ಪಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಪ್ರಕರಣದ ಆರಂಭದಲ್ಲೇ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿದ್ದೆ ಎಂದರು.
“ನಾನು ಮೊದಲ ದಿನವೇ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಹೇಳಿದ್ದೆ. ಆದರೆ ಈ ಸರ್ಕಾರ ಮಾಡುತ್ತಿರುವುದೇನು? ಕೊಲೆ ಮಾಡಿದವರನ್ನು ಬಿಟ್ಟು, ಕೊಲೆಯಾಯಿತು ಎಂದು ಕೂಗಿ ಹೇಳಿದವರ ಮೇಲೆ ತನಿಖೆ ನಡೆಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಸದಾ ವಿರೋಧಿಸಿಕೊಂಡು ಬಂದಿದ್ದೇನೆ. ಆದರೆ ಈಗ ಅನುಕಂಪದಿಂದಾಗಲಿ ಅಥವಾ ನಮ್ಮ ಸಮುದಾಯದವರೊಬ್ಬರು ಮುಖ್ಯಮಂತ್ರಿಯಾಗಿದ್ದಾರೆ ಎಂಬ ಕಾರಣಕ್ಕಾಗಲಿ ಮಾತನಾಡುತ್ತಿಲ್ಲ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿ ಹೊಸ ರಾಜಕೀಯ ಲೆಕ್ಕಾಚಾರ ರೂಪಿಸಲು ಕಾಂಗ್ರೆಸ್ನಲ್ಲೇ ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂತ್ರಸ್ತೆ ಕಳುಹಿಸಿದ ಇಮೇಲ್ ಎಲ್ಲಿಗೆ ಹೋಯಿತು?
ಸ್ಟಿಂಗ್ ಪ್ರಕರಣದ ತನಿಖೆಯ ಕುರಿತು ಮಾತನಾಡಿದ ಕುಮಾರಸ್ವಾಮಿ, ಪ್ರಕರಣಕ್ಕೆ ಸಂಬಂಧಿಸಿದ ಸಂತ್ರಸ್ತೆ ಕಳುಹಿಸಿದ್ದಾರೆ ಎನ್ನಲಾದ ಇಮೇಲ್ ಬಗ್ಗೆ ಪ್ರಶ್ನೆ ಎತ್ತಿದರು.
“ಆ ಸಂತ್ರಸ್ತೆ ಕಳುಹಿಸಿದ ಇಮೇಲ್ ಎಲ್ಲಿಗೆ ಹೋಯಿತು? ಅದನ್ನೇಕೆ ತನಿಖೆ ಮಾಡುತ್ತಿಲ್ಲ? ಇಮೇಲ್ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ಇಂಟೆಲಿಜೆನ್ಸ್ ಮತ್ತು ಗೃಹ ಇಲಾಖೆ ನನ್ನ ಕೈಯಲ್ಲಿದೆಯೇ?” ಎಂದು ಪ್ರಶ್ನಿಸಿದರು.
ಉಳಿದೆಲ್ಲ ವಿಚಾರಗಳು ಗೃಹ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಆದರೆ ಇಮೇಲ್ ವಿಚಾರ ಮಾತ್ರ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲವೇ ಎಂದು ಆಕ್ಷೇಪಿಸಿದರು. ಪ್ರತಿಯೊಂದು ವಿಚಾರಕ್ಕೂ ವಿರೋಧ ಪಕ್ಷದವರೇ ದಾಖಲೆ ನೀಡಬೇಕಾದರೆ ಗೃಹ ಇಲಾಖೆ ಇರುವುದೇಕೆ ಎಂದು ಪ್ರಶ್ನಿಸಿದ ಅವರು, ದಾಖಲೆಗಳನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದರೆ ಗೃಹ ಸಚಿವ ಸ್ಥಾನದಲ್ಲಿ ಮುಂದುವರಿಯಲು ಅವರು ಅನರ್ಹರು ಎಂದು ಕಟುವಾಗಿ ಟೀಕಿಸಿದರು.







