ನವದೆಹಲಿ: ಈ ತಿಂಗಳ ಕೊನೆಯಲ್ಲಿ ಕತಾರ್‌ನ ದೋಹಾದಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಗೆ ಬಲಿಷ್ಠ ಭಾರತ ಎ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ಹಿರಿಯ ಟಿ20 ತಂಡದ ಉಪನಾಯಕ ತಿಲಕ್ ವರ್ಮಾ ತಂಡವನ್ನು ಮುನ್ನಡೆಸಲಿದ್ದು, ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿರುವ ರಜತ್ ಪಾಟಿದಾರ್ ಉಪನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
15 ಆಟಗಾರರ ತಂಡದಲ್ಲಿ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಕೂಡ ಸ್ಥಾನ ಪಡೆದಿದ್ದಾರೆ. ಅನುಭವಿ ಆಟಗಾರರಾದ ರಿಂಕು ಸಿಂಗ್, ಪ್ರಭ್ಸಿಮ್ರಾನ್ ಸಿಂಗ್ ಮತ್ತು ಕುಮಾರ್ ಕುಶಾಗ್ರ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ.
ಯುವ ಆಟಗಾರರಿಗೆ ಮಣೆ
ವಿಕೆಟ್ ಕೀಪರ್-ಬ್ಯಾಟರ್‌ಗಳಾದ ಪ್ರಭ್ಸಿಮ್ರಾನ್ ಸಿಂಗ್ ಮತ್ತು ಕುಮಾರ್ ಕುಶಾಗ್ರ ತಂಡದಲ್ಲಿದ್ದಾರೆ. ಇವರ ಜೊತೆಗೆ ಸೂರ್ಯಾಂಶ್ ಶೆಡ್ಗೆ, ಶಹಬಾಜ್ ಅಹ್ಮದ್, ವಿಪ್ರರಾಜ್ ನಿಗಮ್, ಹರ್ಷ್ ದುಬೆ ಹಾಗೂ ತನುಷ್ ಕೋಟ್ಯಾನ್ ಆಲ್‌ರೌಂಡರ್‌ಗಳಾಗಿ ಆಯ್ಕೆಯಾಗಿದ್ದಾರೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್ ಮತ್ತು ಅರ್ಷದ್ ಖಾನ್ ಸ್ಥಾನ ಪಡೆದಿದ್ದಾರೆ. ಯುವ ಆಟಗಾರರಿಗೆ ಅವಕಾಶ ನೀಡಿರುವ ಆಯ್ಕೆ ಸಮಿತಿ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದೆ.
ಕಳೆದ ಬಾರಿಯ ತಂಡಕ್ಕಿಂತ ಸಾಕಷ್ಟು ಬದಲಾವಣೆ
ಈ ಬಾರಿಯ ಭಾರತ ಎ ತಂಡ ಕಳೆದ ವರ್ಷದ ತಂಡಕ್ಕಿಂತ ಸಾಕಷ್ಟು ಭಿನ್ನವಾಗಿದೆ. ಕಳೆದ ಆವೃತ್ತಿಯಲ್ಲಿ ಜಿತೇಶ್ ಶರ್ಮಾ ನಾಯಕರಾಗಿದ್ದರೆ, ನಮನ್ ಧೀರ್ ಉಪನಾಯಕರಾಗಿದ್ದರು. ಈ ಬಾರಿ ತಿಲಕ್ ವರ್ಮಾ ಮತ್ತು ರಜತ್ ಪಾಟಿದಾರ್‌ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
ಕಳೆದ ಬಾರಿ ತಂಡದಲ್ಲಿದ್ದ ವೈಭವ್ ಸೂರ್ಯವಂಶಿ, ಸೂರ್ಯಾಂಶ್ ಶೆಡ್ಗೆ ಮತ್ತು ಹರ್ಷ್ ದುಬೆ ಮಾತ್ರ ಈ ಬಾರಿಯ ತಂಡದಲ್ಲೂ ಸ್ಥಾನ ಉಳಿಸಿಕೊಂಡಿದ್ದಾರೆ. ಜಿತೇಶ್ ಶರ್ಮಾ, ನಮನ್ ಧೀರ್, ಪ್ರಿಯಾಂಶ್ ಆರ್ಯ, ಅಭಿಷೇಕ್ ಪೊರೆಲ್, ಅಶುತೋಷ್ ಶರ್ಮಾ, ನೆಹಲ್ ವಧೇರಾ, ರಮಣದೀಪ್ ಸಿಂಗ್, ಸುಯಾಶ್ ಶರ್ಮಾ ಸೇರಿದಂತೆ ಹಲವು ಆಟಗಾರರು ಈ ಬಾರಿ ತಂಡದಿಂದ ಹೊರಗುಳಿದಿದ್ದಾರೆ.
ನವೆಂಬರ್ 20ರಂದು ನೇಪಾಳ ವಿರುದ್ಧ ಭಾರತದ ಮೊದಲ ಪಂದ್ಯ
ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿ ನವೆಂಬರ್ 19ರಿಂದ 29ರವರೆಗೆ ಕತಾರ್‌ನ ದೋಹಾದಲ್ಲಿ ನಡೆಯಲಿದೆ. ಒಟ್ಟು ಎಂಟು ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಗುಂಪು ಎ: ಬಾಂಗ್ಲಾದೇಶ ಎ, ಶ್ರೀಲಂಕಾ ಎ, ಅಫ್ಘಾನಿಸ್ತಾನ ಎ ಮತ್ತು ಹಾಂಗ್ ಕಾಂಗ್.
ಗುಂಪು ಬಿ: ಭಾರತ ಎ, ಪಾಕಿಸ್ತಾನ ಎ, ನೇಪಾಳ ಮತ್ತು ಯುಎಇ.
ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ನವೆಂಬರ್ 26 ಮತ್ತು 27ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯ ನವೆಂಬರ್ 29ರಂದು ಆಯೋಜಿಸಲಾಗಿದೆ.
ಭಾರತ ಎ ತಂಡ ನವೆಂಬರ್ 20ರಂದು ನೇಪಾಳ ವಿರುದ್ಧ ಮೊದಲ ಪಂದ್ಯವನ್ನಾಡುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ನವೆಂಬರ್ 22ರಂದು ಪಾಕಿಸ್ತಾನ ಎ ತಂಡವನ್ನು ಎದುರಿಸಲಿದ್ದು, ನವೆಂಬರ್ 24ರಂದು ಯುಎಇ ವಿರುದ್ಧ ಕೊನೆಯ ಗುಂಪು ಪಂದ್ಯ ಆಡಲಿದೆ. ಭಾರತದ ಮೂರೂ ಗುಂಪು ಹಂತದ ಪಂದ್ಯಗಳು ದೋಹಾದಲ್ಲೇ ನಡೆಯಲಿವೆ.
ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ಗೆ ಭಾರತ ಎ ತಂಡ
ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ನಾಯಕ), ರಜತ್ ಪಾಟಿದಾರ್ (ಉಪನಾಯಕ), ರಿಂಕು ಸಿಂಗ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಸೂರ್ಯಾಂಶ್ ಶೆಡ್ಗೆ, ಶಹಬಾಜ್ ಅಹ್ಮದ್, ವಿಪ್ರರಾಜ್ ನಿಗಮ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್ ಮತ್ತು ಅರ್ಷದ್ ಖಾನ್.








