ಕಠ್ಮಂಡು: ನೇಪಾಳದ ಸೋಲುಖುಂಬು ಜಿಲ್ಲೆಯಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಎರಡು ಹೆಲಿಕಾಪ್ಟರ್ಗಳು ಪರಸ್ಪರ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಭಾರತೀಯ ಮೂಲದ ನ್ಯೂಜಿಲೆಂಡ್ ಪ್ರಜೆ ಗಾಯಗೊಂಡಿದ್ದಾರೆ. ಫಿಶ್ಟೇಲ್ ಏರ್ ಹೆಲಿಕಾಪ್ಟರ್ನ ಪೈಲಟ್ಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ (ನವೆಂಬರ್ 3) ಬೆಳಿಗ್ಗೆ ಸೋಲುಖುಂಬು ಜಿಲ್ಲೆಯ ಖುಂಬು ಪಸಾಂಗ್ ಲಹ್ಮು ಗ್ರಾಮೀಣ ಪುರಸಭೆಯ ವಾರ್ಡ್ 4ರ ಫೆರಿಚೆ ಹೆಲಿಪ್ಯಾಡ್ನಲ್ಲಿ ಈ ಅಪಘಾತ ಸಂಭವಿಸಿದೆ. ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಏರ್ ಡೈನಾಸ್ಟಿ ಮತ್ತು ಫಿಶ್ಟೇಲ್ ಏರ್ ಸಂಸ್ಥೆಗಳಿಗೆ ಸೇರಿದ ಎರಡು ಹೆಲಿಕಾಪ್ಟರ್ಗಳು ಮುಖಾಮುಖಿಯಾಗಿ ಡಿಕ್ಕಿಯಾಗಿವೆ.
ಹೆಲಿಕಾಪ್ಟರ್ಗಳ ಬ್ಲೇಡ್ಗಳು ಪರಸ್ಪರ ಡಿಕ್ಕಿ
ಜಿಲ್ಲಾ ಪೊಲೀಸ್ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, ಬೆಳಿಗ್ಗೆ ಸುಮಾರು 8:11ರ ವೇಳೆಗೆ ಈ ದುರ್ಘಟನೆ ನಡೆದಿದೆ. ಹೆಲಿಪ್ಯಾಡ್ನಲ್ಲಿ ಇಳಿಯುವ ಸಂದರ್ಭದಲ್ಲಿ ಎರಡೂ ಹೆಲಿಕಾಪ್ಟರ್ಗಳ ಬ್ಲೇಡ್ಗಳು ಪರಸ್ಪರ ಬಡಿದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಮೃತಪಟ್ಟ ಭಾರತೀಯ ಪ್ರಜೆಯನ್ನು 47 ವರ್ಷದ ವಸಂತ್ ಕುಮಾರ್ ಬಲರಾ ಮಡು ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು 53 ವರ್ಷದ ಶೈಲೇಶ್ ಕಿಶನ್ ಪಟೇಲ್ ಎಂದು ಗುರುತಿಸಲಾಗಿದ್ದು, ಇವರು ಭಾರತೀಯ ಮೂಲದ ನ್ಯೂಜಿಲೆಂಡ್ ಪ್ರಜೆಯಾಗಿದ್ದಾರೆ.
ಗಾಯಾಳು ಆಸ್ಪತ್ರೆಗೆ ಏರ್ಲಿಫ್ಟ್
ಅಪಘಾತದಲ್ಲಿ ಮೃತಪಟ್ಟ ವಸಂತ್ ಕುಮಾರ್ ಅವರ ಮೃತದೇಹವನ್ನು ಪ್ರಭು ಏರ್ ಹೆಲಿಕಾಪ್ಟರ್ ಮೂಲಕ ಲುಕ್ಲಾಕ್ಕೆ ಸ್ಥಳಾಂತರಿಸಲಾಗಿದೆ. ಗಾಯಗೊಂಡ ಶೈಲೇಶ್ ಕಿಶನ್ ಪಟೇಲ್ ಅವರನ್ನು ಮೌಂಟೇನ್ ಹೆಲಿಕಾಪ್ಟರ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ.
ಇದೇ ವೇಳೆ ಫಿಶ್ಟೇಲ್ ಏರ್ ಹೆಲಿಕಾಪ್ಟರ್ನ ಪೈಲಟ್ಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಹೆಚ್ಚಿನ ವಿವರಗಳು ನಿರೀಕ್ಷಿಸಲಾಗುತ್ತಿದೆ.









