ಬೆಂಗಳೂರು: ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆ ಹಾಗೂ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ನಡೆಯುತ್ತಿರುವ ಅಪರಾಧಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಹೊರರಾಜ್ಯಗಳಿಂದ ಕರ್ನಾಟಕಕ್ಕೆ ತನಿಖೆಗಾಗಿ ಆಗಮಿಸುವ ಪೊಲೀಸ್ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ, ಅವರೊಂದಿಗೆ ಸಮನ್ವಯ ಸಾಧಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತುಮಕೂರಿನ ಶಿವ ಎಂಟರ್ಪ್ರೈಸಸ್ ಮತ್ತು ಸಿದ್ಧಿ ಏಜೆನ್ಸೀಸ್ ಎಂಬ ಎರಡು ಸಂಸ್ಥೆಗಳು ಮಹಾರಾಷ್ಟ್ರ ಪೊಲೀಸರ ತನಿಖಾ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ವಡ್ಗಾಂವ್ ಪೊಲೀಸರು ತುಮಕೂರಿನ ತಂಬಾಕು ಉತ್ಪನ್ನಗಳ ಸಂಸ್ಥೆಗಳ ಮೇಲೆ ನಡೆಸಿದ್ದ ತನಿಖಾ ಕಾರ್ಯಾಚರಣೆಯನ್ನು ಹೈಕೋರ್ಟ್ ಕಾನೂನುಬಾಹಿರ ಎಂದು ಘೋಷಿಸಿದೆ. ಸ್ಥಳೀಯ ಪೊಲೀಸರ ಗಮನಕ್ಕೆ ತರದೆ ಹೊರರಾಜ್ಯದ ಪೊಲೀಸರು ಕಾರ್ಯಾಚರಣೆ ನಡೆಸಿರುವುದಕ್ಕೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಹಾಗೂ ನಕಲಿ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ವಂಚನೆಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮನೆ ಅಥವಾ ಕಚೇರಿಗೆ ಬರುವವರು ನಿಜವಾದ ಪೊಲೀಸ್ ಅಧಿಕಾರಿಗಳೇ ಎಂಬುದನ್ನು ಸಾರ್ವಜನಿಕರು ತಕ್ಷಣ ಪರಿಶೀಲಿಸುವುದು ಕಷ್ಟವಾಗುತ್ತದೆ. ಯಾವುದೇ ಮುನ್ಸೂಚನೆ ಇಲ್ಲದೆ ನಡೆಯುವ ಪೊಲೀಸ್ ಕಾರ್ಯಾಚರಣೆಗಳು ಜನರಲ್ಲಿ ಆತಂಕ ಸೃಷ್ಟಿಸುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಪರಿಸ್ಥಿತಿಯನ್ನು ಸೈಬರ್ ಅಪರಾಧಿಗಳು ದುರುಪಯೋಗಪಡಿಸಿಕೊಂಡು ಸಾರ್ವಜನಿಕರನ್ನು ಬೆದರಿಸುವ ಅಪಾಯವೂ ಇದೆ. ಹೀಗಾಗಿ ಬೇರೆ ರಾಜ್ಯಕ್ಕೆ ತೆರಳಿ ತನಿಖೆ ನಡೆಸುವ ಪೊಲೀಸರು ಆಯಾ ಪ್ರದೇಶದ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅಗತ್ಯ ಸಹಕಾರ ಪಡೆಯಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಏನಿದು ಪ್ರಕರಣ?
2025ರ ಆಗಸ್ಟ್ 19ರಂದು ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ ಪೊಲೀಸರು ಲಾರಿಯೊಂದನ್ನು ತಡೆದು ಪಾನ್ ಮಸಾಲಾ ಹಾಗೂ ಜಗಿಯುವ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಕೊಲ್ಹಾಪುರದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದ ಎಫ್ಐಆರ್ನಲ್ಲಿ ತುಮಕೂರಿನ ಶಿವ ಎಂಟರ್ಪ್ರೈಸಸ್ ಮತ್ತು ಸಿದ್ಧಿ ಏಜೆನ್ಸೀಸ್ ಸಂಸ್ಥೆಗಳ ಹೆಸರು ಉಲ್ಲೇಖವಾಗಿರಲಿಲ್ಲ. ಆದರೂ ಆಗಸ್ಟ್ 21ರಂದು ಮಹಾರಾಷ್ಟ್ರದ ಐದರಿಂದ ಆರು ಮಂದಿ ಪೊಲೀಸರ ತಂಡ ತುಮಕೂರಿಗೆ ಆಗಮಿಸಿ ಸಂಸ್ಥೆಗಳಲ್ಲಿ ತನಿಖೆ ನಡೆಸಿತ್ತು.
ಸಂಸ್ಥೆಗಳ ಪಾಲುದಾರರಿಗೆ ಕೊಲ್ಹಾಪುರಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಪೊಲೀಸರು, ತುಮಕೂರಿನಲ್ಲಿಯೇ ಅವರ ಹೇಳಿಕೆ ದಾಖಲಿಸಿಕೊಂಡಿದ್ದರು. ಅಲ್ಲದೆ, ಲೆಕ್ಕಪತ್ರಗಳನ್ನು ಪರಿಶೀಲಿಸಿ, ಜಪ್ತಿ ಮಹಜರ್ ಸಿದ್ಧಪಡಿಸದೆ ಲೆಡ್ಜರ್ ಪುಸ್ತಕಗಳ ಪ್ರತಿಗಳನ್ನು ಪಡೆದುಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಕ್ರಮವನ್ನು ಪ್ರಶ್ನಿಸಿ ಎರಡೂ ಸಂಸ್ಥೆಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದವು.
ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಮಹಾರಾಷ್ಟ್ರ ಪೊಲೀಸರು ಕೈಗೊಂಡ ಕಾರ್ಯಾಚರಣೆಯನ್ನು ಕಾನೂನುಬಾಹಿರ ಎಂದು ಘೋಷಿಸಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್ ರದ್ದುಗೊಳಿಸಲು ನಿರಾಕರಿಸಿದೆ. ಮುಂದಿನ ದಿನಗಳಲ್ಲಿ ತನಿಖೆಯ ಭಾಗವಾಗಿ ಕರ್ನಾಟಕದಲ್ಲಿ ಯಾವುದೇ ಕ್ರಮ ಕೈಗೊಳ್ಳುವ ಮೊದಲು ಸ್ಥಳೀಯ ಪೊಲೀಸರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.









