ಹಾಸನ: ಹಾಸನದ ಪ್ರಸಿದ್ಧ ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಬರೋಬ್ಬರಿ ₹3 ಲಕ್ಷ ಮೌಲ್ಯದ ಚಿನ್ನದ ಬಳೆಯನ್ನು ಕಂದಾಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ದೇವಿಯ ದರ್ಶನಕ್ಕೆ ಬಂದಿದ್ದ ಮಹಿಳೆ ಚಿನ್ನದ ಬಳೆ ಕಳೆದುಕೊಂಡು ಆತಂಕಗೊಂಡಿದ್ದ ಸಂದರ್ಭದಲ್ಲಿ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಪ್ರಾಮಾಣಿಕತೆಯಿಂದ ಬಳೆ ಮತ್ತೆ ಮಾಲೀಕೆಯ ಕೈ ಸೇರಿದೆ.
ರಾಮನಗರ ಮೂಲದ ರಮ್ಯಾ ಎಂಬ ಮಹಿಳೆ ತಮ್ಮ ಸಹೋದರಿಯೊಂದಿಗೆ ಹಾಸನಾಂಬ ದೇವಿಯ ದರ್ಶನಕ್ಕಾಗಿ ಹಾಸನಕ್ಕೆ ಆಗಮಿಸಿದ್ದರು. ದೇವಿಯ ದರ್ಶನ ಪಡೆಯಲು ₹1,000 ಮೌಲ್ಯದ ವಿಶೇಷ ದರ್ಶನದ ಟಿಕೆಟ್ ಪಡೆದುಕೊಂಡು ದೇವಾಲಯದ ಸರತಿ ಸಾಲಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅವರ ಕೈಯಲ್ಲಿದ್ದ ಚಿನ್ನದ ಬಳೆ ಆಕಸ್ಮಿಕವಾಗಿ ಕಳಚಿ ಬಿದ್ದಿದೆ.
ಸುಮಾರು 30 ಗ್ರಾಂ ತೂಕದ ಚಿನ್ನದ ಬಳೆಯ ಮೌಲ್ಯ ₹3 ಲಕ್ಷ ಎಂದು ಹೇಳಲಾಗಿದೆ. ಬೆಲೆಬಾಳುವ ಬಳೆ ಕಳೆದುಹೋಗಿರುವುದು ಗಮನಕ್ಕೆ ಬರುತ್ತಿದ್ದಂತೆ ರಮ್ಯಾ ಆತಂಕಗೊಂಡಿದ್ದಾರೆ. ದೇವಾಲಯದ ಆವರಣ ಹಾಗೂ ಸರತಿ ಸಾಲಿನಲ್ಲಿ ಬಳೆಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಎಷ್ಟೇ ಹುಡುಕಿದರೂ ಬಳೆ ಪತ್ತೆಯಾಗಿರಲಿಲ್ಲ.
ಇದೇ ವೇಳೆ ದೇವಾಲಯದ ಆವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂದಾಯ ಇಲಾಖೆ ಸಿಬ್ಬಂದಿಗೆ ಚಿನ್ನದ ಬಳೆ ಸಿಕ್ಕಿದೆ. ಬೆಲೆಬಾಳುವ ಆಭರಣ ಸಿಕ್ಕಿದ್ದರೂ ಅದನ್ನು ತಮ್ಮ ಬಳಿ ಇಟ್ಟುಕೊಳ್ಳದೆ, ಅದರ ನಿಜವಾದ ಮಾಲೀಕರಿಗೆ ತಲುಪಿಸಲು ಸಿಬ್ಬಂದಿ ಮುಂದಾಗಿದ್ದಾರೆ.
ಚಿನ್ನದ ಬಳೆಯನ್ನು ದೇವಾಲಯದಲ್ಲಿ ಧ್ವನಿವರ್ಧಕದ ಮೂಲಕ ಪ್ರಕಟಣೆ ಮಾಡುತ್ತಿದ್ದ ಲಕ್ಷ್ಮೀನಾರಾಯಣ ಅವರಿಗೆ ಹಸ್ತಾಂತರಿಸಿದ್ದಾರೆ. ಬಳಿಕ ಲಕ್ಷ್ಮೀನಾರಾಯಣ ಅವರು ದೇವಾಲಯದ ಮೈಕ್ ಮೂಲಕ ಚಿನ್ನದ ಬಳೆ ಸಿಕ್ಕಿರುವ ಬಗ್ಗೆ ಘೋಷಣೆ ಮಾಡಿದ್ದಾರೆ.
ದೇವಾಲಯದ ಆವರಣದಲ್ಲಿ ಚಿನ್ನದ ಬಳೆ ಸಿಕ್ಕಿರುವ ಕುರಿತು ಪ್ರಕಟಣೆ ಕೇಳುತ್ತಿದ್ದಂತೆ ಬಳೆ ಕಳೆದುಕೊಂಡಿದ್ದ ರಮ್ಯಾ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಸಿಬ್ಬಂದಿ ಬಳಿ ಇದ್ದ ಚಿನ್ನದ ಬಳೆಯನ್ನು ಪರಿಶೀಲಿಸಿ ಅದು ತಮ್ಮದೇ ಎಂದು ಗುರುತಿಸಿದ್ದಾರೆ. ಬಳಿಕ ಬಳೆಯನ್ನು ರಮ್ಯಾ ಅವರಿಗೆ ಮರಳಿಸಲಾಗಿದೆ.
ಕಳೆದುಹೋಯಿತು ಎಂದು ಭಾವಿಸಿದ್ದ ₹3 ಲಕ್ಷ ಮೌಲ್ಯದ ಚಿನ್ನದ ಬಳೆ ಮತ್ತೆ ಕೈ ಸೇರಿದ್ದರಿಂದ ರಮ್ಯಾ ಸಂತಸ ವ್ಯಕ್ತಪಡಿಸಿದ್ದಾರೆ. ದೇವಿಯ ದರ್ಶನಕ್ಕೆ ಬಂದ ಸಂದರ್ಭದಲ್ಲಿ ಎದುರಾಗಿದ್ದ ಆತಂಕ ಸಿಬ್ಬಂದಿಯ ಪ್ರಾಮಾಣಿಕತೆಯಿಂದ ದೂರವಾಗಿದೆ.








