ಬೆಂಗಳೂರು: ಸಾರ್ವಜನಿಕ ಸಮಾರಂಭಗಳು, ದೇವಾಲಯಗಳು, ವಿವಾಹ ಮಂಟಪಗಳು ಹಾಗೂ ಇತರ ನಟರ ಕಾರ್ಯಕ್ರಮಗಳಲ್ಲಿ ‘ಡಿ-ಬಾಸ್’ ಹೆಸರಿನಲ್ಲಿ ಕೆಲ ಅಭಿಮಾನಿಗಳು ಮಾಡುತ್ತಿರುವ ಅತಿರೇಕದ ವರ್ತನೆಗೆ ಕಡಿವಾಣ ಹಾಕಲು ನಟ ದರ್ಶನ್ ಅವರ ಅಧಿಕೃತ ಬಳಗ ಮುಂದಾಗಿದೆ.
ಇತರ ನಟರು ಹಾಗೂ ಗಣ್ಯರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಅನಗತ್ಯವಾಗಿ ‘ಡಿ-ಬಾಸ್’ ಎಂದು ಕೂಗಿ ಮುಜುಗರ ಸೃಷ್ಟಿಸಬಾರದು ಎಂದು ದರ್ಶನ್ ಅವರ ಅಧಿಕೃತ ಡಿಜಿಟಲ್ ವೇದಿಕೆ ‘ಡಿ ಕಂಪನಿ’ ಅಭಿಮಾನಿಗಳಿಗೆ ಮನವಿ ಮಾಡಿದೆ. ಡಿ ಕಂಪನಿಯ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಳ್ಳಲಾಗಿದ್ದು,
ಬೇರೆ ನಟರ ವೇದಿಕೆ, ಸಿನಿಮಾ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಭೆಗಳಲ್ಲಿ ದರ್ಶನ್ ಅವರ ಹೆಸರನ್ನು ಕೂಗಬಾರದು ಎಂದು ಸೂಚಿಸಲಾಗಿದೆ. ನೆಚ್ಚಿನ ನಟನ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ತಾಳ್ಮೆಯಿಂದ ವ್ಯಕ್ತಪಡಿಸಬೇಕು. ದರ್ಶನ್ ಅವರ ಪ್ರಸ್ತುತ ಕಾನೂನು ಪರಿಸ್ಥಿತಿಯನ್ನು ಅಭಿಮಾನಿಗಳು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಮಂಡ್ಯ ಕಾರ್ಯಕ್ರಮದಲ್ಲಿ ನಡೆದಿದ್ದೇನು?
ಕಳೆದ ಭಾನುವಾರ ಮಂಡ್ಯದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಟ ಧ್ರುವ ಸರ್ಜಾ ಹಾಗೂ ಶಾಸಕ ರವಿ ಗಣಿಗ ವೇದಿಕೆಯಲ್ಲಿದ್ದ ವೇಳೆ ಕೆಲವರು ನಿರಂತರವಾಗಿ ‘ಡಿ-ಬಾಸ್’ ಎಂದು ಘೋಷಣೆ ಕೂಗಿ ಗದ್ದಲ ಸೃಷ್ಟಿಸಿದ್ದರು. ಇದರಿಂದ ಅಸಮಾಧಾನಗೊಂಡ ಶಾಸಕ ರವಿ ಗಣಿಗ, ಅಭಿಮಾನಿಗಳ ವರ್ತನೆಯನ್ನು ಬಹಿರಂಗವಾಗಿಯೇ ಖಂಡಿಸಿದ್ದರು.
“ನೀವೆಲ್ಲ ಈ ರೀತಿ ಅತಿಯಾಗಿ ಕಿರುಚಾಡಿ, ಅತಿರೇಕ ತೋರಿದ್ದರಿಂದಲೇ ದರ್ಶನ್ ಇವತ್ತು ಜೈಲು ಸೇರುವಂತಾಯಿತು” ಎಂದು ಅವರು ಹೇಳಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಹಿಂದೆಯೂ ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಕಿವಿಮಾತು
ಇದೇ ರೀತಿಯ ಘಟನೆ ಈ ಹಿಂದೆ ರಾಮನಗರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲೂ ನಡೆದಿತ್ತು. ಆ ಸಂದರ್ಭದಲ್ಲಿ ಕೆಲವರು ‘ಡಿ-ಬಾಸ್’ ಎಂದು ಘೋಷಣೆ ಕೂಗಿದ್ದಕ್ಕೆ ಡಿ.ಕೆ. ಶಿವಕುಮಾರ್ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಇನ್ನು ಮದುವೆ ಸಮಾರಂಭವೊಂದರಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರನ್ನು ಕಂಡಾಗಲೂ ಕೆಲ ಅಭಿಮಾನಿಗಳು ‘ಡಿ-ಬಾಸ್’ ಎಂದು ಕೂಗಿದ್ದರು. ಆಗ ವಿಜಯಲಕ್ಷ್ಮಿ ಅವರೇ ಅಭಿಮಾನಿಗಳಿಗೆ ಬುದ್ಧಿ ಹೇಳಿ, ದಯವಿಟ್ಟು ಈ ರೀತಿ ಘೋಷಣೆ ಕೂಗಬೇಡಿ. ಇಂತಹ ವರ್ತನೆಗಳಿಂದಲೇ ಅವರಿಗೆ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಅಭಿಮಾನಿಗಳಿಗೆ ಡಿ ಕಂಪನಿ ಸಂದೇಶ
ಮಂಡ್ಯದಲ್ಲಿ ನಡೆದ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಡಿ ಕಂಪನಿ, ವಿಜಯಲಕ್ಷ್ಮಿ ಅವರು ಈ ಹಿಂದೆ ನೀಡಿದ್ದ ಸಲಹೆಯನ್ನೇ ಪುನರುಚ್ಚರಿಸಿದೆ. ಇತರರ ಕಾರ್ಯಕ್ರಮಗಳಲ್ಲಿ ದರ್ಶನ್ ಹೆಸರನ್ನು ಕೂಗಿ ಮುಜುಗರ ಉಂಟುಮಾಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಸಂಯಮದಿಂದ ವರ್ತಿಸಬೇಕು ಎಂಬ ಸಂದೇಶವನ್ನು ಅಭಿಮಾನಿಗಳಿಗೆ ರವಾನಿಸಿದೆ.









