ಮಡಿಕೇರಿ: ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯನ್ನು ಶಿರಚ್ಛೇದನ ಮಾಡಿ ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಅಪರಾಧಿ ಪ್ರಕಾಶ್ಗೆ ಕೊಡಗು ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ. 2024ರ ಮೇ ತಿಂಗಳಲ್ಲಿ ಸೂರ್ಲಬ್ಬಿ ಸಮೀಪ ನಡೆದಿದ್ದ ಈ ಘಟನೆ ಇಡೀ ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರಕಾಶ್, ಸೂರ್ಲಬ್ಬಿ ಸಮೀಪದ ಮೀನಾ ಎಂಬ ವಿದ್ಯಾರ್ಥಿನಿಯನ್ನು ಹತ್ಯೆಗೈದಿದ್ದ. ಮದುವೆಗೆ ನಿರಾಕರಿಸಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿ, ರುಂಡದೊಂದಿಗೆ ಪರಾರಿಯಾಗಿದ್ದ. ಬಳಿಕ ಕಾಡಿನಲ್ಲಿ ಅಡಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುರೇಂದ್ರ ಅವರು ಮರಣದಂಡನೆ ಶಿಕ್ಷೆ ಪ್ರಕಟಿಸಿದ್ದಾರೆ. ತೀರ್ಪು ಪ್ರಕಟಿಸುವ ವೇಳೆ, ಶಿರಚ್ಛೇದನದ ಮೂಲಕ ಬಾಲಕಿಯ ಧ್ವನಿಯನ್ನು ಅಡಗಿಸಬಹುದು; ಆದರೆ ನ್ಯಾಯದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ನ್ಯಾಯಾಧೀಶರು ವ್ಯಕ್ತಪಡಿಸಿದ್ದಾರೆ.
ಮರದಲ್ಲಿ ಪತ್ತೆಯಾಗಿದ್ದ ಬಾಲಕಿಯ ರುಂಡ
ಆರೋಪಿ ಬಂಧನವಾದರೂ ಬಾಲಕಿಯ ರುಂಡ ಪತ್ತೆಯಾಗಿರಲಿಲ್ಲ. ಪೊಲೀಸರು ತೀವ್ರ ಹುಡುಕಾಟ ನಡೆಸಿದಾಗ, ಕೊಲೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿದ್ದ ಮರವೊಂದರಲ್ಲಿ ರುಂಡ ಪತ್ತೆಯಾಗಿತ್ತು. ತಂಗಿಯ ರುಂಡವನ್ನು ಕಂಡು ಆಕೆಯ ಸಹೋದರ ದಿಲೀಪ್ ಆಕ್ರೋಶಗೊಂಡಿದ್ದ. ಈ ವೇಳೆ ಪೊಲೀಸರು ಆತನನ್ನು ಸಮಾಧಾನಪಡಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದಿದ್ದರು. ಆತ ಬಂದೂಕು ತಂದು ಆರೋಪಿಯ ಮೇಲೆ ಗುಂಡು ಹಾರಿಸಲು ಮುಂದಾಗಿದ್ದ ಎನ್ನಲಾಗಿದೆ.
ಪರೀಕ್ಷೆಯಲ್ಲಿ ಉತ್ತೀರ್ಣಳಾದ ಸಂಭ್ರಮದಲ್ಲಿದ್ದ ಮೀನಾ
ಮೀನಾ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯ ಏಕೈಕ ವಿದ್ಯಾರ್ಥಿನಿಯಾಗಿದ್ದಳು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗುವ ಮೂಲಕ ತನ್ನ ಶಾಲೆಗೆ ಶೇ.100ರಷ್ಟು ಫಲಿತಾಂಶ ತಂದುಕೊಟ್ಟಿದ್ದಳು.
ಪರೀಕ್ಷೆಯಲ್ಲಿ ಪಾಸಾದ ಸಂತಸದಲ್ಲಿದ್ದ ಮೀನಾ, ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಪ್ರಕಾಶ್ ಆಕೆಯನ್ನು ಅಡ್ಡಗಟ್ಟಿ ಹತ್ಯೆಗೈದಿದ್ದ. ಈ ಘಟನೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪ್ರಕರಣದಲ್ಲಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ಪ್ರಕಟಿಸಿದೆ.









