ವಿಜಯಸಾಕ್ಷಿ ಸುದ್ದಿ, ಗದಗ: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಾಲ್ಯದಲ್ಲಿಯೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತುವ ವಿಶಿಷ್ಟ ಪ್ರಯತ್ನವಾಗಿ ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಯಶಸ್ವಿಯಾಗಿ ನಡೆಯಿತು. ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿಯೇ ನಡೆದ ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನ ಮಾಡಿ ತಮ್ಮ ನಾಯಕ-ನಾಯಕಿಯರನ್ನು ಆಯ್ಕೆ ಮಾಡಿದರು.
ಶಾಲಾ ನಾಯಕ-ನಾಯಕಿ ಹಾಗೂ ಉಪನಾಯಕ-ಉಪನಾಯಕಿಯರ ಆಯ್ಕೆಗಾಗಿ ಆಯೋಜಿಸಿದ್ದ ಚುನಾವಣೆಯಲ್ಲಿ ಅಭ್ಯರ್ಥಿಗಳ ಘೋಷಣೆ, ನಾಮಪತ್ರ ಸಲ್ಲಿಕೆ, ಪ್ರಚಾರ ಭಾಷಣ, ಪೋಸ್ಟರ್ ಮೇಕಿಂಗ್ ಸ್ಪರ್ಧೆ, ಚುನಾವಣಾ ಜಾಗೃತಿ ನಾಟಕ ಸೇರಿದಂತೆ ಚುನಾವಣೆಯ ಎಲ್ಲ ಹಂತಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಾಯಿತು. ಇದರಿಂದ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಯ ನೈಜ ಅನುಭವ ದೊರೆಯುವಂತಾಯಿತು.
ಚುನಾವಣೆಯ ವಿಶೇಷ ಆಕರ್ಷಣೆಯಾಗಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಮಾದರಿಯ ಸಾಫ್ಟ್ವೇರ್ನ್ನು ಸಿದ್ಧಪಡಿಸಲಾಗಿತ್ತು. ವಿದ್ಯಾರ್ಥಿಗಳು ಇದೇ ವ್ಯವಸ್ಥೆಯ ಮೂಲಕ ಮತ ಚಲಾಯಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು. ಯುವ ಪೀಳಿಗೆಗೆ ಮತದಾನದ ಮಹತ್ವ ಮತ್ತು ಪ್ರಜಾಪ್ರಭುತ್ವದ ಜವಾಬ್ದಾರಿಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ವಿನೂತನ ಪ್ರಯೋಗ ಕೈಗೊಳ್ಳಲಾಗಿತ್ತು.
ಚುನಾವಣೆಗೆ ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು 26 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, 496 ಮತದಾರರಲ್ಲಿ 473 ವಿದ್ಯಾರ್ಥಿಗಳು ಮತದಾನ ಮಾಡಿ ಶೇ.95.36ರಷ್ಟು ಮತದಾನ ದಾಖಲಿಸಿದರು. 6ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮತದಾನದ ಹಕ್ಕು ನೀಡಲಾಗಿತ್ತು.
ಚುನಾವಣೆಯ ಫಲಿತಾಂಶವನ್ನು ಜೂನ್ 13ರಂದು ಪ್ರಕಟಿಸಲಾಗುವುದು ಎಂದು ಶಾಲಾ ಚುನಾವಣಾಧಿಕಾರಿ ಹಾಗೂ ಶಿಕ್ಷಕಿ ಪೂಜಾ ಎಂ. ಕಾಡಪ್ಪನವರ ತಿಳಿಸಿದ್ದಾರೆ. ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಂಭ್ರಮ ವ್ಯಕ್ತಪಡಿಸಿದ್ದು, ಶಾಲಾ ಆವರಣವೇ ಪ್ರಜಾಪ್ರಭುತ್ವದ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಯಿತು.
ಪ್ರಜಾಪ್ರಭುತ್ವದ ಪ್ರಾಯೋಗಿಕ ಪಾಠ
ಮತದಾನ, ನಾಯಕತ್ವ ಹಾಗೂ ಜನಪ್ರತಿನಿಧಿಗಳ ಆಯ್ಕೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಅನುಭವಾತ್ಮಕವಾಗಿ ತಿಳಿಸಿಕೊಟ್ಟ ಈ ಶಾಲಾ ಚುನಾವಣೆ, ಭವಿಷ್ಯದ ಜಾಗೃತ ಮತದಾರರನ್ನು ರೂಪಿಸುವಲ್ಲಿ ಮಹತ್ವದ ಹೆಜ್ಜೆಯಾಗಿ ಗಮನ ಸೆಳೆಯಿತು.



