ಬೆಳಗಾವಿ: ಗಂಡು ಮಗು ಹುಟ್ಟಿದ ಸಂಭ್ರಮದ ಪಾರ್ಟಿ ಕೇಳಿದ ವಿಚಾರಕ್ಕೆ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ಹಣಮಂತಪ್ಪ ಯಮನಪ್ಪ ಇಟಗಿ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಯಾಗಿ ಅವರ ಸ್ನೇಹಿತ ವಿಶ್ವನಾಥ ಪೂಜೇರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಾಹಿತಿಯ ಪ್ರಕಾರ, ಇಬ್ಬರೂ ಮದ್ಯದ ಅಮಲಿನಲ್ಲಿ ಗ್ರಾಮದ ಕಟ್ಟೆಯಲ್ಲಿ ಕುಳಿತು ಮಾತನಾಡುತ್ತಿದ್ದ ವೇಳೆ ಗಂಡು ಮಗು ಹುಟ್ಟಿದ ಹಿನ್ನೆಲೆಯಲ್ಲಿ ಹಣಮಂತಪ್ಪ ಪಾರ್ಟಿ ಕೇಳಿದ್ದಾರೆ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.
ಗಲಾಟೆ ತೀವ್ರಗೊಂಡ ವೇಳೆ ಆರೋಪಿ ವಿಶ್ವನಾಥನ ಕಣ್ಣಿಗೆ ಹಣಮಂತಪ್ಪನ ಕೈ ಬೆರಳು ತಾಕಿದ್ದು, ಇದರಿಂದ ಕೋಪಗೊಂಡ ಆರೋಪಿ ಕಲ್ಲಿನಿಂದ ಹಣಮಂತಪ್ಪನ ತಲೆಗೆ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ. ತೀವ್ರ ರಕ್ತಸ್ರಾವದಿಂದ ಹಣಮಂತಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೋಹರಂ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದೀಗ ಸೂತಕದ ವಾತಾವರಣ ನಿರ್ಮಾಣವಾಗಿದೆ.
ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನೇಸರಗಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.



