HomeEntertainmentನಟಿ ಐಶ್ವರ್ಯ ಸಿಂದೋಗಿಗೆ ಸೋಷಿಯಲ್ ಮೀಡಿಯಾ ಕಿರುಕುಳ: ನಕಲಿ ಖಾತೆಗಳ ವಿರುದ್ಧ ಎಫ್‌ಐಆರ್, ಸೈಬರ್ ತನಿಖೆ...

ನಟಿ ಐಶ್ವರ್ಯ ಸಿಂದೋಗಿಗೆ ಸೋಷಿಯಲ್ ಮೀಡಿಯಾ ಕಿರುಕುಳ: ನಕಲಿ ಖಾತೆಗಳ ವಿರುದ್ಧ ಎಫ್‌ಐಆರ್, ಸೈಬರ್ ತನಿಖೆ ಆರಂಭ

ಬೆಂಗಳೂರು: ಸ್ಯಾಂಡಲ್‌ವುಡ್ ನಟಿಯರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಕಮೆಂಟ್‌ಗಳು ಹಾಗೂ ಮಾನಸಿಕ ಕಿರುಕುಳ ನೀಡುವ ಪ್ರಕರಣಗಳು ಮುಂದುವರಿದಿರುವ ನಡುವೆ, ಇದೀಗ ನಟಿ ಐಶ್ವರ್ಯ ಸಿಂದೋಗಿ ಕೂಡ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪ್ರಕಟಿಸುವ ಪೋಸ್ಟ್‌ಗಳಿಗೆ ನಿರಂತರವಾಗಿ ಅಶ್ಲೀಲ, ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಅವರು ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ನಟಿ, ತಮಗೆ ಪರಿಚಯವಿರುವ ವ್ಯಕ್ತಿಯೊಬ್ಬರ ಹೆಸರನ್ನು ಉಲ್ಲೇಖಿಸಿದ್ದು, ಇದೇ ವ್ಯಕ್ತಿ ಈ ಹಿಂದೆಯೂ ಬೆದರಿಕೆ ಹಾಕಿದ್ದ ಹಿನ್ನೆಲೆ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದ್ದಾರೆ. ಈಗ ಅದೇ ವ್ಯಕ್ತಿ ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸಿ ಅವುಗಳ ಮೂಲಕ ನಿರಂತರವಾಗಿ ಕೆಟ್ಟ ಕಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ತಮಗೆ ಮಾನಸಿಕ ಕಿರುಕುಳ ನೀಡುತ್ತಿರುವ ಎಲ್ಲಾ ನಕಲಿ ಖಾತೆಗಳ ಹಿಂದೆ ಇರುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಐಶ್ವರ್ಯ ಸಿಂದೋಗಿ ಮನವಿ ಮಾಡಿದ್ದಾರೆ. ಅವರ ದೂರಿನ ಆಧಾರದಲ್ಲಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ನಟಿಯರ ತೇಜೋವಧೆ ನಡೆಸುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಇತ್ತೀಚೆಗೆ ನಟಿ ರಮ್ಯಾ ಹಾಗೂ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಕೂಡ ಇದೇ ರೀತಿಯ ಆನ್‌ಲೈನ್ ಕಿರುಕುಳದ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸೈಬರ್ ಕ್ರೈಂ ಪೊಲೀಸರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದರು.

ಆದರೂ ನಟಿಯರನ್ನು ಗುರಿಯಾಗಿಸಿಕೊಂಡು ನಕಲಿ ಖಾತೆಗಳ ಮೂಲಕ ಮಾನಹಾನಿ, ನಿಂದನೆ ಹಾಗೂ ಆನ್‌ಲೈನ್ ಕಿರುಕುಳ ನೀಡುವ ಪ್ರವೃತ್ತಿ ಇನ್ನೂ ಮುಂದುವರಿದಿದ್ದು, ಐಶ್ವರ್ಯ ಸಿಂದೋಗಿ ಪ್ರಕರಣ ಮತ್ತೊಮ್ಮೆ ಸೈಬರ್ ಅಪರಾಧಗಳ ವಿರುದ್ಧ ಕಠಿಣ ಕ್ರಮದ ಅಗತ್ಯವನ್ನು ಎತ್ತಿ ತೋರಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img