ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ಸಲ್ಲಿಸಿದ್ದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ. ಅಗತ್ಯ ವೀಡಿಯೊಗಳನ್ನು ಒದಗಿಸುವುದಾಗಿ ಸಿಐಎಸ್ಎಫ್ ನ್ಯಾಯಾಲಯಕ್ಕೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅರ್ಜಿಯನ್ನು ಇತ್ಯರ್ಥಗೊಳಿಸಲಾಗಿದೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠದ ಮುಂದೆ ನಡೆದ ವಿಚಾರಣೆಯಲ್ಲಿ, ರನ್ಯಾ ಪರ ವಕೀಲ ವೈ.ಎಲ್. ಮಹೇಶ್, ಹಿಂದಿನ ನ್ಯಾಯಾಲಯದ ಆದೇಶವನ್ನು ಸಿಐಎಸ್ಎಫ್ ಸಮರ್ಪಕವಾಗಿ ಪಾಲಿಸಿಲ್ಲ ಎಂದು ವಾದ ಮಂಡಿಸಿದರು.
2025ರ ಮಾರ್ಚ್ 3ರ ಸಿಸಿಟಿವಿ ದೃಶ್ಯಾವಳಿಯನ್ನು ಸ್ಪಷ್ಟ ರೂಪದಲ್ಲಿ ಒದಗಿಸುವಂತೆ ನಿರ್ದೇಶನ ನೀಡಬೇಕೆಂದು ಅವರು ಮನವಿ ಮಾಡಿದರು.
ಸಿಐಎಸ್ಎಫ್ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಆದೇಶವನ್ನು ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡಿರುವುದಾಗಿ ತಿಳಿಸಿ, ಅರ್ಜಿದಾರರು ಅಧಿಕಾರಿಗಳನ್ನು ಸಂಪರ್ಕಿಸಿದರೆ ಮಾರ್ಚ್ 3ರ ಸಂಜೆ 4.30ರಿಂದ ಮಾರ್ಚ್ 4ರ ಬೆಳಿಗ್ಗೆ 11 ಗಂಟೆಯವರೆಗಿನ ದೃಶ್ಯಾವಳಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಭರವಸೆಯನ್ನು ದಾಖಲಿಸಿಕೊಂಡ ಹೈಕೋರ್ಟ್, ಸಂಬಂಧಿತ ಸಿಸಿಟಿವಿ ದೃಶ್ಯಾವಳಿಯನ್ನು ಒದಗಿಸುವಂತೆ ಸೂಚಿಸಿ ಅರ್ಜಿಯನ್ನು ಮುಕ್ತಾಯಗೊಳಿಸಿತು.



