ಮುಂಬೈ: ‘ದೃಶ್ಯಂ 3’ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ನಿರ್ಮಾಣವಾಗಿರುವ ನಡುವೆಯೇ ನಿರ್ದೇಶಕ ಅಭಿಷೇಕ್ ಪಾಠಕ್ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ಹಿಂದಿ ಮತ್ತು ಮಲಯಾಳಂ ಆವೃತ್ತಿಗಳು ಈ ಬಾರಿ ಒಂದೇ ರೀತಿಯಲ್ಲಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಜಯ್ ದೇವಗನ್ ಅಭಿನಯದ ಹಿಂದಿ ಆವೃತ್ತಿಯ ಶೂಟಿಂಗ್ ಈಗಾಗಲೇ ಮುಗಿದಿದ್ದು, ಚಿತ್ರವನ್ನು ಅಕ್ಟೋಬರ್ 2ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಮೋಹನ್‌ಲಾಲ್ ನಟನೆಯ ಮಲಯಾಳಂ ಸಿನಿಮಾ ಮೇ 21ರಂದು ಬಿಡುಗಡೆಯಾಗಲಿದೆ.
ಹಿಂದಿ ‘ದೃಶ್ಯಂ 3’ ಅನ್ನು ಹೆಚ್ಚು ಥ್ರಿಲ್ಲಿಂಗ್ ಹಾಗೂ ಸಸ್ಪೆನ್ಸ್‌ನಿಂದ ತುಂಬಿದ ಫ್ಯಾಮಿಲಿ ಥ್ರಿಲ್ಲರ್ ಆಗಿ ರೂಪಿಸಲಾಗಿದೆ. ವಿಶೇಷವಾಗಿ ಕ್ಲೈಮ್ಯಾಕ್ಸ್ ಪ್ರೇಕ್ಷಕರಿಗೆ ಭಾರೀ ಶಾಕ್ ನೀಡಲಿದೆ ಎಂದು ಅಭಿಷೇಕ್ ಪಾಠಕ್ ಹೇಳಿದ್ದಾರೆ.
ಜೀತು ಜೋಸೆಫ್ ಅವರ ಮೂಲ ಕಥೆಯನ್ನು ಆಧಾರ ಮಾಡಿಕೊಂಡಿದ್ದರೂ, ಹಿಂದಿ ಪ್ರೇಕ್ಷಕರ ರುಚಿಗೆ ತಕ್ಕಂತೆ ಕಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಕಥೆ ಬರೆಯುವ ಮೊದಲು ಕ್ಲೈಮ್ಯಾಕ್ಸ್ ಫಿಕ್ಸ್ ಮಾಡಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಇದೇ ವೇಳೆ ಕನ್ನಡದ ‘ದೃಶ್ಯ 3’ ಕೂಡ ಬರಲಿದ್ದು, ಮಲಯಾಳಂ ಮೂಲ ಕಥೆಯನ್ನು ಹೆಚ್ಚು ಅನುಸರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಸಿನಿ ವಲಯದಲ್ಲಿ ಹರಿದಾಡುತ್ತಿದೆ.



