ಯಾದಗಿರಿ: ಪಿಎಸ್ಐ ಹುದ್ದೆ ಕೊಡಿಸುವುದಾಗಿ ಹೇಳಿ ಬರೋಬ್ಬರಿ 60 ಲಕ್ಷ ರೂ. ಹಣ ಪಡೆದು ವಂಚಿಸಿದ ಆರೋಪ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಳ್ಳಳ್ಳಿ ಗ್ರಾಮದಲ್ಲಿ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರ ವಿರುದ್ಧ ಕೆಂಭಾವಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೇವೇಂದ್ರ ಅವರ ಅಣ್ಣನ ಪತ್ನಿ ಪಿಎಸ್ಐ ಹುದ್ದೆಗೆ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಗಿರೀಶ್ ಎಂಬಾತನ ಪರಿಚಯವಾಗಿತ್ತು. ಈ ವೇಳೆ ಪಿಎಸ್ಐ ಹುದ್ದೆ ಕೊಡಿಸುವುದಾಗಿ ಹೇಳಿ 1 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗಿರೀಶ್ ಸೂಚನೆಯಂತೆ ದೇವೇಂದ್ರ ಅವರು ಏಪ್ರಿಲ್ 7ರಂದು ಅರಸಿನಕುಂಟೆಯ ರೂಮ್ನಲ್ಲಿ ಗಿರೀಶ್ ಮತ್ತು ದೀಪಕ್ಗೆ 20 ಲಕ್ಷ ರೂ. ನಗದು ನೀಡಿದ್ದಾರೆ. ಬಳಿಕ ವಿವಿಧ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಬ್ಯಾಂಕ್ ಖಾತೆಗಳಿಗೆ 40 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಹೀಗೆ ಒಟ್ಟು 60 ಲಕ್ಷ ರೂ. ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಹಣ ಹೊಂದಿಸಲು ದೇವೇಂದ್ರ ಅವರು ಹೋಮ್ ಲೋನ್ ಪಡೆದಿದ್ದು, ಹೊಲ ಮಾರಾಟ ಮಾಡುವುದರ ಜೊತೆಗೆ ಸಂಬಂಧಿಕರಿಂದಲೂ ಸಾಲ ಪಡೆದಿದ್ದರು ಎನ್ನಲಾಗಿದೆ.
ಆದರೆ ಪಿಎಸ್ಐ ನೇಮಕಾತಿ ನಡೆಯದ ಹಿನ್ನೆಲೆಯಲ್ಲಿ ನೀಡಿದ್ದ ಹಣವನ್ನು ವಾಪಸ್ ಕೇಳಿದಾಗ ಆರೋಪಿಗಳು ಹಣ ನೀಡದೆ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ದೇವೇಂದ್ರ ದೂರಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ಹುದ್ದೆಯೂ ಸಿಗದೆ, ಹಣವೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಗಿರೀಶ್, ದೀಪಕ್, ಶಶಾಂಕ್ಗೌಡ, ಉತ್ತೇಜ, ಶ್ರೇಯಸ್ಗೌಡ, ಆನಂದ್, ಎಂ.ಸಿ. ರಂಗನಾಥ್ ಮತ್ತು ಸತ್ಯ ಅಲಿಯಾಸ್ ಸತೀಶ್ ವಿರುದ್ಧ ಬಿಎನ್ಎಸ್ ಕಲಂ 316(2), 318(2), 318(4) ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



