ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-19ರಲ್ಲಿ ಸೋಲು-ಗೆಲುವಿನ ಹೋರಾಟದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಯುವ ಸ್ಫೋಟಕ ಬ್ಯಾಟರ್ ಆಯುಷ್ ಮ್ಹಾತ್ರೆ ಗಾಯಗೊಂಡು ಟೂರ್ನಿಯಿಂದಲೇ ಹೊರಗುಳಿದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದ ಆಯುಷ್ ಮ್ಹಾತ್ರೆ, ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರನ್ ಓಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ನಂತರ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಗಾಯ ಗಂಭೀರವಾಗಿರುವುದು ದೃಢಪಟ್ಟಿದೆ.
ವೈದ್ಯಕೀಯ ವರದಿಯ ಪ್ರಕಾರ, ಸಂಪೂರ್ಣ ಗುಣಮುಖರಾಗಲು ಕನಿಷ್ಠ 6 ರಿಂದ 12 ವಾರಗಳ ವಿಶ್ರಾಂತಿ ಅಗತ್ಯವಿದೆ. ಈ ಹಿನ್ನೆಲೆ ಐಪಿಎಲ್ನ ಉಳಿದ ಪಂದ್ಯಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ.
ಈ ಸೀಸನ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದ ಆಯುಷ್ ಮ್ಹಾತ್ರೆ, 6 ಪಂದ್ಯಗಳಲ್ಲಿ 177.88 ಸ್ಟ್ರೈಕ್ ರೇಟ್ನಲ್ಲಿ 201 ರನ್ ಗಳಿಸಿ ತಂಡದ ಪರ ಅಗ್ರ ರನ್ಸ್ಕೋರರ್ ಆಗಿದ್ದರು. ಅವರ ಅನುಪಸ್ಥಿತಿ ಸಿಎಸ್ಕೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.
ಇದೀಗ ಅವರ ಬದಲಿಗೆ ಹೊಸ ಆಟಗಾರನನ್ನು ತಂಡದಲ್ಲಿ ಸೇರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ಚಿಂತನೆ ನಡೆಸುತ್ತಿದೆ.



