ಮೈಸೂರು: ಚಾಮುಂಡಿಬೆಟ್ಟದ ಆಷಾಢ ಶುಕ್ರವಾರ ಮಹೋತ್ಸವಕ್ಕೆ ಜಿಲ್ಲಾಡಳಿತ ಈ ಬಾರಿ ಕಠಿಣ ನಿಯಮ ಜಾರಿಗೊಳಿಸಿದೆ. ಸಾಮಾನ್ಯ ಭಕ್ತರಿಗೆ ತೊಂದರೆಯಾಗದಂತೆ ₹300 ವಿಶೇಷ ದರ್ಶನ ಟಿಕೆಟ್ ರದ್ದು, ಶಿಫಾರಸು ಪತ್ರದ ಮೂಲಕ ದರ್ಶನಕ್ಕೆ ಅವಕಾಶ ಇಲ್ಲ, ವಿಐಪಿಗಳಿಗೆ ನಿಗದಿತ ಸಮಯ, ಖಾಸಗಿ ವಾಹನಗಳ ಪ್ರವೇಶ ನಿಷೇಧ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಲಾಗಿದೆ.
ಜುಲೈ 17ರಿಂದ ಆರಂಭವಾಗಲಿರುವ ವಿಶೇಷ ಪೂಜೆಗಳ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಿದ್ಧತಾ ಸಭೆ ನಡೆಸಿದರು.
ಸಭೆಯಲ್ಲಿ ₹300 ದರ್ಶನ ಟಿಕೆಟ್ ವ್ಯವಸ್ಥೆಯನ್ನು ಸಂಪೂರ್ಣ ರದ್ದುಗೊಳಿಸಿ, ₹2,000 ನೇರ ದರ್ಶನ ಟಿಕೆಟ್ ಮಾತ್ರ ಮುಂದುವರಿಸಲು ತೀರ್ಮಾನಿಸಲಾಯಿತು. ರಾಜಕೀಯ ನಾಯಕರು ಅಥವಾ ಅಧಿಕಾರಿಗಳ ಶಿಫಾರಸು ಪತ್ರದ ಆಧಾರದ ಮೇಲೆ ಯಾವುದೇ ವಿಶೇಷ ಪ್ರವೇಶ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಆಷಾಢ ಶುಕ್ರವಾರಗಳಂದು ಬೆಳಿಗ್ಗೆ 5.30ರಿಂದ 9.30ರವರೆಗೆ ಮಾತ್ರ ವಿಐಪಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಕೇವಲ ಪ್ರೋಟೋಕಾಲ್ ವ್ಯಾಪ್ತಿಯ ಗಣ್ಯರಿಗೆ ಮಾತ್ರ ಈ ಸೌಲಭ್ಯ ದೊರೆಯಲಿದ್ದು, ಉಳಿದ ಸಮಯದಲ್ಲಿ ಸಂಪೂರ್ಣವಾಗಿ ಸಾಮಾನ್ಯ ಭಕ್ತರ ದರ್ಶನಕ್ಕೆ ಆದ್ಯತೆ ನೀಡಲಾಗುತ್ತದೆ.
ಸಂಚಾರ ನಿಯಂತ್ರಣಕ್ಕಾಗಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಲಲಿತ ಮಹಲ್ ಪಾರ್ಕಿಂಗ್ನಿಂದ ಕೆಎಸ್ಆರ್ಟಿಸಿಯ ಉಚಿತ ಬಸ್ ಸೇವೆ ಮೂಲಕ ಭಕ್ತರನ್ನು ಬೆಟ್ಟಕ್ಕೆ ಕರೆದೊಯ್ಯಲಾಗುತ್ತದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಕಾರ್ಯದರ್ಶಿ ರೂಪಾ ಹಾಗೂ ಡಿಸಿಪಿ ಸುಂದರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿ ಭದ್ರತೆ ಮತ್ತು ವ್ಯವಸ್ಥೆಗಳ ಕುರಿತು ಅಂತಿಮ ಸಿದ್ಧತೆ ಪರಿಶೀಲಿಸಿದರು.



