ಬೆಂಗಳೂರು: ನಗರದಲ್ಲಿ ಪ್ರಮುಖ ಸಂಚಾರ ಮಾರ್ಗವಾಗಿರುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಅನ್ನು ನಾಲ್ಕು ದಿನಗಳ ಕಾಲ ಸಂಪೂರ್ಣ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಫ್ಲೈಓವರ್ ಕೇಬಲ್ ಅಳವಡಿಕೆ ದುರಸ್ತಿ ಮತ್ತು ಅಂತಿಮ ಲೋಡ್ ಟೆಸ್ಟಿಂಗ್ ಹಿನ್ನೆಲೆ, ಮೇ 5ರ ಬೆಳಗ್ಗೆ 5 ಗಂಟೆಯಿಂದ ಮೇ 8ರ ಬೆಳಗ್ಗೆ 11 ಗಂಟೆಯವರೆಗೆ ಸಂಚಾರ ನಿರ್ಬಂಧ ಜಾರಿಯಾಗಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿರ್ಧಾರ ಕೈಗೊಂಡಿದ್ದು, ಫ್ಲೈಓವರ್ನ ಎರಡೂ ಬದಿಗಳಲ್ಲೂ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ವಾಹನ ಸವಾರರು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ಮನವಿ ಮಾಡಿದೆ.
ಪರ್ಯಾಯ ಮಾರ್ಗಗಳು:
ನೆಲಮಂಗಲದಿಂದ ಬೆಂಗಳೂರಿಗೆ:
ಕೆನ್ನಮೆಟಲ್ ಫ್ಯಾಕ್ಟರಿ ಬಳಿ ಫ್ಲೈಓವರ್ ಕೆಳಭಾಗದ ಎನ್ಎಚ್-4 ಮತ್ತು ಸರ್ವಿಸ್ ರಸ್ತೆ ಮೂಲಕ → 8ನೇ ಮೈಲಿ → ದಾಸರಹಳ್ಳಿ → ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ → ಎಸ್.ಆರ್.ಎಸ್ ಜಂಕ್ಷನ್ → ಗೊರಗುಂಟೆಪಾಳ್ಯ → ಜಾಲಹಳ್ಳಿ ಕ್ರಾಸ್
ಸಿ.ಎಂ.ಟಿ.ಐದಿಂದ ನೆಲಮಂಗಲಕ್ಕೆ:
ಫ್ಲೈಓವರ್ ಕೆಳಭಾಗದ ಎನ್ಎಚ್-4 ಮತ್ತು ಸರ್ವಿಸ್ ರಸ್ತೆ ಮೂಲಕ → ಎಸ್.ಆರ್.ಎಸ್ ಜಂಕ್ಷನ್ → ಪೊಲೀಸ್ ಠಾಣೆ ಜಂಕ್ಷನ್ → ಜಾಲಹಳ್ಳಿ ಕ್ರಾಸ್ → ದಾಸರಹಳ್ಳಿ → 8ನೇ ಮೈಲಿ → ರ್ಲೆಜಿ ಟೋಲ್
ಗಮನಾರ್ಹವಾಗಿ, ಇದೇ ಕಾಮಗಾರಿಗಾಗಿ ಫ್ಲೈಓವರ್ ಅನ್ನು ಏಪ್ರಿಲ್ 13ರಿಂದ 5 ದಿನ ಬಂದ್ ಮಾಡುವ ಯೋಜನೆ ಮೊದಲು ಘೋಷಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿ ಮುಂದೂಡಲ್ಪಟ್ಟಿದ್ದು, ಸಂಚಾರವನ್ನು ತಾತ್ಕಾಲಿಕವಾಗಿ ಮುಂದುವರಿಸಲಾಗಿತ್ತು. ಈಗ ಅಂತಿಮ ಹಂತದ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆ, ನಗರದಲ್ಲಿ ಟ್ರಾಫಿಕ್ ಒತ್ತಡ ಹೆಚ್ಚಾಗುವ ಸಾಧ್ಯತೆ ಇದ್ದು, ವಾಹನ ಸವಾರರು ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳುವುದು ಅಗತ್ಯ.



