‘ಬಿಗ್ ಬಾಸ್ ಸೀಸನ್ 11’ರ ಆಟ 90 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಅದಲ್ಲದೆ ಮನೆಯಲ್ಲಿ ಹೊಸ ವರ್ಷದ ವಾತಾವರಣ ಮೂಡಿದೆ. ಮನೆಯಲ್ಲಿ ಬಿಗ್ಬಾಸ್ ವಿಶೇಷ ಟಾಸ್ಕ್ ಅನ್ನು ನೀಡಿದ್ದರು. ಈ ಟಾಸ್ಕ್ ಅನ್ನು 10 ನಿಮಿಷದಲ್ಲಿ ಪೂರ್ಣಗೊಳಿಸಿದ್ರೆ ಅಮ್ಮನನ್ನು ಭೇಟಿ ಮಾಡಬಹುದು ಎಂದು ಬಿಗ್ ಬಾಸ್ ಹೇಳಿದ್ದರು.
ಅದರಂತೆ ಮನೆಯಲ್ಲಿ ತ್ರಿವಿಕ್ರಮ್ ಅವರು, ಪಜಲ್ (ಒಂದು ಚಿತ್ರವನ್ನು ಜೋಡಿಸುವುದು) ಅನ್ನು ಫುಲ್ ಟೆನ್ಷನ್ನಲ್ಲಿ ಬೇಗ ಬೇಗ ಪೂರ್ಣಗೊಳಿಸಿದರು. ಟಾಸ್ಕ್ ಮುಗಿದಿದ್ದೆ ತಡ ಮೇನ್ ಡೋರ್ ಓಪನ್ ಆಗಿದೆ. ಮುಖ್ಯ ಬಾಗಿಲಿನಿಂದ ತ್ರಿವಿಕ್ರಮ್ ಅವರ ತಾಯಿ ಮನೆಯೊಳಗೆ ಬಂದಿದ್ದಾರೆ.
ಈ ವೇಳೆ ತ್ರಿವಿಕ್ರಮ್, ಅವರ ತಾಯಿಯ ಆಶೀರ್ವಾದವನ್ನು ಎಲ್ಲಾ ಸ್ಪರ್ಧಿಗಳು ಪಡೆದರು. ತ್ರಿವಿಕ್ರಮ್ ಅವರ ತಾಯಿಯನ್ನು ಭವ್ಯಾ ತಬ್ಬಿಕೊಂಡು ಖುಷಿಪಟ್ಟರು. ಬಳಿಕ ಸೋಫಾ ಮೇಲೆ ಕುಳಿತು ಇಬ್ಬರು ಮಾತನಾಡುವಾಗ, ನನ್ನ ಮಗನಿಗೆ ತಾಯಿಯಾಗಿ, ಫ್ರೆಂಡ್ ಆಗಿ ಎಲ್ಲ ತರದಲ್ಲೂ ಬೆಂಬಲವಾಗಿ ನಿಂತಿದ್ದೀಯಾ. ರಾಧಾ ಕೃಷ್ಣನ ತರ ಇದ್ದೀರಿ ಎಂದು ತ್ರಿವಿಕ್ರಮ್ ತಾಯಿ ಭವ್ಯಾರನ್ನು ಮೆಚ್ಚಿದ್ದಾರೆ. ಅವರ ಮಾತಿನಿಂದ ಭವ್ಯಾ ನಾಚಿ ನೀರಾಗಿದ್ದಾರೆ.
ಇನ್ನು ಅಮ್ಮ ಮನೆಯಿಂದ ಹೊರ ಹೋಗುವಾಗ ತ್ರಿವಿಕ್ರಮ್ ಅವರು ಇನ್ನು 10 ನಿಮಿಷ ಅನುಮತಿ ಕೊಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಬಿಗ್ ಬಾಸ್ ನೀಡದ ಹಿನ್ನೆಲೆ ಅವರ ತಾಯಿ ಮನೆಯಿಂದ ಹೊರನಡೆದರು. ಆಗ ತ್ರಿವಿಕ್ರಮ್ ಕಣ್ಣೀರು ಹಾಕಿದ್ದಾರೆ. ಅದಷ್ಟೇ ಅಲ್ಲ, ಬಿಗ್ ಬಾಸ್ ಮನೆಗೆ ಭವ್ಯಾ ಅವರ ತಾಯಿ ಮತ್ತು ಸಹೋದರಿ ಕೂಡ ಎಂಟ್ರಿ ಕೊಟ್ಟಿದ್ದಾರೆ.








